ಎನ್‍ಎಚ್‍ಎಂ ಸಿಬ್ಬಂದಿ ಖಾಯಂಗೊಳಿಸಲು ಸಾಧ್ಯವಿಲ್ಲ: ಸಚಿವ ದಿನೇಶ್ ಗುಂಡೂರಾವ್
ಬೆಳಗಾವಿ (ಸುವರ್ಣ ವಿಧಾನಸೌಧ) : ‘ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್‍ಎಚ್‍ಎಂ) ಯೋಜನೆಯಡಿ ಗುತ್ತಿಗೆ ಹಾಗೂ ಹೊರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಖಾಯಂಗೊಳಿಸಲು ಸಾಧ್ಯವಿಲ್ಲ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಯಶಪಾಲ್ ಎ.ಸುವರ್ಣ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಮೇಲ್ಕಂಡ ಸಿಬ್ಬಂದಿಗೆ 2023-24ನೆ ಸಾಲಿನಲ್ಲಿ ಶೇ.15ರಷ್ಟು ವೇತನ ಹೆಚ್ಚಳಕ್ಕೆ ಆದೇಶ ಮಾಡಲಾಗಿದೆ. 2024-25ನೆ ಸಾಲಿಗೂ ಶೇ.15ರಷ್ಟು ವೇತನ ಹೆಚ್ಚಳ ಮುಂದುವರಿಸುವ ಬಗ್ಗೆ ಪ್ರಸ್ತಾವ ಪರಿಶೀಲನೆಯಲ್ಲಿದೆ ಎಂದು ಮಾಹಿತಿ ನೀಡಿದರು.
ಎನ್‍ಎಚ್‍ಎಂ ಯೋಜನೆಯಡಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ ಸೇವಾ ಅವಧಿಯಲ್ಲಿ ಒಂದು ಬಾರಿ ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ ಪ್ರಸ್ತಾವ ಪರಿಶೀಲನೆಯಲ್ಲಿದೆ. ಆರೋಗ್ಯ ವಿಮೆ, ಗುಂಪು ವಿಮೆ ಕಲ್ಪಿಸಲಾಗಿದೆ. ಅಲ್ಲದೆ, ವಿಶೇಷ ನೇಮಕಾತಿ ಸಂದರ್ಭದಲ್ಲಿ ಶೇ.2ರಷ್ಟು ಕೃಪಾಂಕವನ್ನು ನೀಡಲಾಗುವುದು. ಆದರೆ, ಖಾಯಂಗೊಳಿಸುವ ಪ್ರಸ್ತಾವ ಸರಕಾರದ ಮುಂದಿಲ್ಲ ಎಂದು ಸ್ಪಷ್ಟಣೆ ನೀಡಿದರು.