ಬೆಳಗಾವಿ ಅಧಿವೇಶನ | ಶಿಕ್ಷಕರ ನೇಮಕಕ್ಕೆ ಕ್ರಮ: ಸಚಿವ ಮಧು ಬಂಗಾರಪ್ಪ

Update: 2024-12-19 15:06 GMT

ಬೆಳಗಾವಿ (ಸುವರ್ಣ ವಿಧಾನಸೌಧ) : ‘ರಾಜ್ಯದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಆ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ. ಪರ್ಯಾಯವಾಗಿ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಕೆ.ಗೋಪಾಲಯ್ಯ ಪರವಾಗಿ ಸದಸ್ಯ ಭೈರತಿ ಬಸವರಾಜು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಒಟ್ಟು 46,755 ಶಾಲೆಗಳಿದ್ದು, 1,65,618 ಶಿಕ್ಷಕರ ಹುದ್ದೆಗಳಿವೆ. ಪ್ರಾಥಮಿಕ ಶಿಕ್ಷಣದಲ್ಲಿ 50,067 ಹಾಗೂ ಪ್ರೌಢಶಾಲೆಗಳಲ್ಲಿ 9,705 ಹುದ್ದೆಗಳು ಖಾಲಿ ಇವೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ 45ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ವಿವರ ನೀಡಿದರು.

‘ಈಗಾಗಲೇ 13,500 ಶಿಕ್ಷಕರ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದ್ದು, 12 ಸಾವಿರ ಶಿಕ್ಷಕರ ನೇಮಕ ಮಾಡಲಾಗಿದೆ. 700 ಶಿಕ್ಷಕರ ನೇಮಕದ ವಿಚಾರ ಸುಪ್ರೀಂ ಕೋರ್ಟ್‍ನಲ್ಲಿ ಬಾಕಿ ಇದೆ. ಕಲ್ಯಾಣ ಕರ್ನಾಟಕದಲ್ಲಿ 5,300 ಶಿಕ್ಷಕರನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಬಿಜೆಪಿ ಸರಕಾರದಲ್ಲಿ ಮೂರೂವರೆ ವರ್ಷದಲ್ಲಿ 4,500 ಶಿಕ್ಷಕರನ್ನು ಮಾತ್ರ ನೇಮಕ ಮಾಡಲಾಗಿತ್ತು. ಅನುದಾನಿತ ಶಾಲೆಗಳ ಶಿಕ್ಷಕರ ನೇಮಕಾತಿಗೂ ಅವಕಾಶ ಕಲ್ಪಿಸಲಾಗಿದೆ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ್ರದಲ್ಲಿ 20 ಶಿಕ್ಷಕರ ಕೊರತೆಯಿದ್ದು, ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

ಗೌರವಧನ ಹೆಚ್ಚಳ:

‘ಪದವಿ ಪೂರ್ವ ಕಾಲೇಜುಗಳ ಅತಿಥಿ ಶಿಕ್ಷಕರ ಗೌರವಧನ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಇದೀಗ ನಾವು ನೀಡುತ್ತಿರುವ ಗೌರವ ಧನ ಕಡಿಮೆ ಎಂಬುದು ನಮ್ಮ ಗಮನದಲ್ಲಿದೆ. ಗೌರವಧನದ ಹೆಚ್ಚಳದ ಬೇಡಿಕೆಯನ್ನು ಆರ್ಥಿಕ ಇಲಾಖೆ ತಿರಸ್ಕರಿಸಿದೆ. 30ಸಾವಿರ ರೂ.ಗೆ ಗೌರವಧನ ಹೆಚ್ಚಳ ಕಷ್ಟ ಸಾಧ್ಯ. ಈ ಬಗ್ಗೆ ಸಿಎಂ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು’ ಎಂದು ಬಿಜೆಪಿ ಸದಸ್ಯ ಸಿ.ಸಿ.ಪಾಟೀಲ್ ಪ್ರಶ್ನೆಗೆ ಮಧು ಬಂಗಾರಪ್ಪ ಉತ್ತರಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಸಿಸಿ.ಪಾಟೀಲ್ ಪರವಾಗಿ ವಿ.ಸುನೀಲ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಸಕಾಲದಲ್ಲಿ ಅತಿಥಿ ಉಪನ್ಯಾಸಕರ ಗೌರವ ಧನ ಬಿಡುಗಡೆ ಸಂಬಂಧ ಇದ್ದ ತಾಂತ್ರಿ ತೊಂದರೆ ನಿವಾರಿಸಿದ್ದು, ಅನುದಾನ ಹಂಚಿಕೆ ಮಾಡಿ ನಿಯಮಿತವಾಗಿ ಪಾವತಿಸಲು ಕ್ರಮ ವಹಿಸಲಾಗುವುದು ಎಂದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News