ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ | ಬಿಜೆಪಿ-ಆರೆಸ್ಸೆಸ್ ನಾಯಕರ ಮನಸ್ಸಿನಲ್ಲಿರುವುದು ಹೊರಗೆ ಬಂದಿದೆ : ಸಿಎಂ ಸಿದ್ದರಾಮಯ್ಯ
ಬೆಳಗಾವಿ : ‘ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಮಾತನಾಡುತ್ತಾ ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ ಆಡಿರುವ ತುಚ್ಛೀಕರಣದ ಮಾತುಗಳು ಬಾಯಿ ತಪ್ಪಿನಿಂದ ಬಂದುದ್ದಲ್ಲ. ಬಿಜೆಪಿ ಮತ್ತು ಸಂಘಪರಿವಾರದ ನಾಯಕರ ಮನಸ್ಸಿನಲ್ಲಿರುವುದು ಹೊರಗೆ ಬಂದಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ ಅವರು, ‘ಇಡೀ ದೇಶ ಬಿಜೆಪಿ ಮತ್ತು ಅದರ ನಾಯಕರ ವಿರುದ್ಧ ತಿರುಗಿಬಿದ್ದಾಗ ನಿರೀಕ್ಷೆಯಂತೆ ‘ತಮ್ಮ ಮಾತನ್ನು ತಿರುಚಲಾಗಿದೆ, ಅಂಬೇಡ್ಕರ್ ಬಗ್ಗೆ ನಮಗೆ ಗೌರವವಿದೆ’ ಎಂದೆಲ್ಲ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಆತ್ಮೀಯ ಸ್ನೇಹಿತನ ರಕ್ಷಣೆಗೆ ಧಾವಿಸಿ ಉದ್ದನೆಯ ಹೇಳಿಕೆಯನ್ನು ನೀಡಿದ್ದಾರೆ. ಇವೆಲ್ಲವೂ ನಿರೀಕ್ಷಿತವಾದುದು’ ಎಂದು ಟೀಕಿಸಿದರು.
‘ಅಂಬೇಡ್ಕರ್ ರನ್ನು ಇವರು ದ್ವೇಷಿಸಲು ಮುಖ್ಯ ಕಾರಣ ಅವರು ಕೊಟ್ಟು ಹೋಗಿರುವ ಸಂವಿಧಾನ. ಈ ಲಿಖಿತ ಸಂವಿಧಾನ ಜಾರಿಗೆ ಬರುವವರೆಗೆ ನಮ್ಮಲ್ಲಿ ಜಾತಿ ಮತ್ತು ಲಿಂಗ ತಾರತಮ್ಯವನ್ನು ಶಾಸನವನ್ನಾಗಿ ಮಾಡಿರುವ ಮನುಸ್ಮೃತಿ ಜಾರಿಯಲ್ಲಿತ್ತು. ಅಂಬೇಡ್ಕರ್ ಕೇವಲ ಸಂವಿಧಾನವನ್ನು ಕೊಟ್ಟು ಹೋಗಿಲ್ಲ, ಅಲ್ಲಿಯವರೆಗೆ ಜಾರಿಯಲ್ಲಿದ್ದ ಅಲಿಖಿತ ಸಂವಿಧಾನವಾದ ಮನುಸ್ಮೃತಿಯನ್ನು 1927ರ ಡಿ.25ರಂದು ಸಾರ್ವಜನಿಕವಾಗಿ ಸುಟ್ಟು ಹಾಕಿದ್ದರು. ಅದರ 22 ವರ್ಷಗಳ ನಂತರ ಅವರು ಹೊಸ ಸಂವಿಧಾನವನ್ನು ಹುಟ್ಟುಹಾಕಿದ್ದರು’ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಮತ್ತು ಸಂಘ ಪರಿವಾರದಲ್ಲಿರುವ ಮನುವಾದಿಗಳು ಅಂಬೇಡ್ಕರ್ ಅವರನ್ನು ದ್ವೇಷಿಸಲು ಇದು ಕಾರಣ. ಇತಿಹಾಸವನ್ನು ಓದಿರುವ ನಮ್ಮಂತಹವರಿಗೆ ಬಿಜೆಪಿ ಮತ್ತು ಆರೆಸ್ಸೆಸ್‍ನ ಅಂಬೇಡ್ಕರ್ ದ್ವೇಷ ಹೊಸದಲ್ಲ. ಅಂಬೇಡ್ಕರ್ ಮತ್ತು ಅವರು ಬರೆದಿರುವ ಸಂವಿಧಾನವನ್ನು ಅವರು ಬದುಕಿರುವಾಗಲೇ ಬಿಜೆಪಿಯ ಮಾತೃ ಸಂಸ್ಥೆ ಆರೆಸ್ಸೆಸ್ ಯಾಕೆ ತಿರಸ್ಕರಿಸಿತ್ತು? ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.
ಆರೆಸ್ಸೆಸ್ ನಾಯಕರಾಗಿದ್ದ ಹೆಡಗೆವಾರ್, ಗೋಳ್ವಾಳ್ಕರ್ ಮತ್ತು ಸಾವರ್ಕರ್ ಸಂವಿಧಾನವನ್ನು ವಿರೋಧಿಸಿ ನೀಡಿರುವ ಹೇಳಿಕೆಗಳೇನು ಎನ್ನುವ ವಿವರಗಳೆಲ್ಲ ಇತಿಹಾಸದ ಪುಟಗಳಲ್ಲಿ ಇವೆ. ನಿಮ್ಮ ಸುಳ್ಳುಗಳು ಮತ್ತು ಆತ್ಮವಂಚನೆಯ ನಡವಳಿಕೆಗಳಿಂದ ಅದನ್ನು ಮರೆಮಾಚಬಹುದು, ಆದರೆ ಅಳಿಸಿಹಾಕಲಾಗುವುದಿಲ್ಲ ಎನ್ನುವುದು ನೆನಪಿರಲಿ ಎಂದು ಅವರು ತಿಳಿಸಿದರು.
ಅಂಬೇಡ್ಕರ್ 1949ರ ನ.30ರಂದು ಸಂವಿಧಾನವನ್ನು ದೇಶಕ್ಕೆ ಅರ್ಪಿಸಿದರು. ಅದರ ನಾಲ್ಕು ದಿನಗಳ ನಂತರ ಆರೆಸ್ಸೆಸ್ ಮುಖವಾಣಿ ಆರ್ಗನೈಸರ್ ಪತ್ರಿಕೆ ಸಂವಿಧಾನವನ್ನು ವಿರೋಧಿಸಿ ಸಂಪಾದಕೀಯ ಬರೆದಿರುವುದು ಇತಿಹಾಸದ ಪುಟದಲ್ಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
‘ಅಂಬೇಡ್ಕರ್ ರಚಿತ ಸಂವಿಧಾನದಲ್ಲಿ ಭಾರತೀಯತೆಯೇ ಇಲ್ಲ, ಇವತ್ತಿಗೂ ಮನುಸ್ಮೃತಿಯಲ್ಲಿ ಉಲ್ಲೇಖಿಸಲಾದ ಕಾನೂನುಗಳು ಪ್ರಪಂಚದ ಗೌರವಕ್ಕೆ ಪಾತ್ರವಾಗಿದೆ. ನಮ್ಮ ಸಂವಿಧಾನವನ್ನು ರಚಿಸಿದ ಪಂಡಿತರಿಗೆ ಇದ್ಯಾವುದೂ ಲೆಕ್ಕಕ್ಕಿಲ್ಲ’ ಎಂದು ಸಂವಿಧಾನವನ್ನು ವಿರೋಧಿಸಿ, ಬಾಬಾಸಾಹೇಬರನ್ನು ‘ಪಂಡಿತ’ರೆಂದು ಗೇಲಿ ಮಾಡಿ ಆರೆಸ್ಸೆಸ್ ಸಂಪಾದಕೀಯ ಬರೆದಿತ್ತು. ಈ ಸಂಪಾದಕೀಯವನ್ನು ಇಂದಿಗೂ ಆರೆಸ್ಸೆಸ್ ಸಮರ್ಥಿಸಿಕೊಳ್ಳುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಆರೆಸ್ಸೆಸ್‍ನ ಎರಡನೇ ಸರಸಂಘ ಚಾಲಕ ಎಂ.ಎಸ್.ಗೋಳ್ವಾಳ್ಕರ್ ಬರೆದಿರುವ ಆರೆಸ್ಸೆಸ್‍ನ ಸಂವಿಧಾನವೆಂದೇ ಪರಿಗಣಿಸಲ್ಪಟ್ಟಿರುವ ‘ಬಂಚ್ ಆಫ್ ಥಾಟ್ಸ್’ ನಲ್ಲಿಯೂ ಅಂಬೇಡ್ಕರ್ ಮತ್ತು ಸಂವಿಧಾನವನ್ನು ವಿರೋಧಿಸಿದ್ದರು. ‘ವೇದಗಳ ನಂತರ ನಮ್ಮ ಹಿಂದೂ ರಾಷ್ಟ್ರಕ್ಕೆ ಪೂಜನೀಯವಾದ ಗ್ರಂಥವೆಂದರೆ ಮನುಸ್ಮೃತಿಯಾಗಿದ್ದು, ಅನಾದಿ ಕಾಲದಿಂದಲೂ ನಮ್ಮ ಸಂಸ್ಮೃತಿ ಸಂಪ್ರದಾಯ ಮತ್ತು ಆಚಾರಗಳಿಗೆ ಅದು ಆಧಾರವಾಗಿದೆ. ಇವತ್ತು ಮನುಸ್ಮೃತಿಯೇ ಹಿಂದುಗಳ ಕಾನೂನು’ ಎಂದು ಗೋಳ್ವಾಳ್ಕರ್ ಹೇಳಿದ್ದರು. ಇದು ಸುಳ್ಳೇ? ಇದೇ ರೀತಿ ವಿ.ಡಿ.ಸಾವರ್ಕರ್ ಸಂವಿಧಾನವನ್ನು ವಿರೋಧಿಸಿದ್ದರು ಎಂದು ಮುಖ್ಯಮಂತ್ರಿ ಹೇಳಿದರು.
ಬಿಜೆಪಿಯಾಗಲಿ, ಆರೆಸ್ಸೆಸ್ ಆಗಲಿ ಇಲ್ಲಿಯವರೆಗೆ ಸಂವಿಧಾನ ಮತ್ತು ಅಂಬೇಡ್ಕರ್ ಅವರನ್ನು ವಿರೋಧಿಸಿದ್ದ ಆರೆಸ್ಸೆಸ್ ಸಂಪಾದಕೀಯವನ್ನಾಗಲಿ, ಗೋಳ್ವಾಳ್ಕರ್ ಮತ್ತು ಸಾವರ್ಕರ್ ಅಭಿಪ್ರಾಯವನ್ನಾಗಲಿ ತಿರಸ್ಕರಿಸಿಲ್ಲ. ಇದರ ಅರ್ಥ ಇವರ ಮನಸ್ಸಿನೊಳಗೆ ಅಂಬೇಡ್ಕರ್ ಬಗೆಗಿನ ದ್ವೇಷ, ಅಸೂಯೆ, ಅಸಹನೆ ಈಗಲೂ ಜೀವಂತವಾಗಿದೆ ಎಂದು ಅರ್ಥವಲ್ಲವೇ? ಇದರಿಂದಾಗಿ ಅಮಿತ್ ಶಾ ಅವರು ಅಂಬೆಡ್ಕರ್ ಬಗ್ಗೆ ಆಡಿದ ಮಾತು ನನಗೆ ಆಶ್ಚರ್ಯ ಉಂಟು ಮಾಡಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಅಮಿತ್ ಶಾರನ್ನು ಅಮಾನತ್ತುಗೊಳಿಸಬೇಕಿತ್ತು: ಬಾಬಾಸಾಹೇಬ್ ಕೊಟ್ಟ ಸಂವಿಧಾನ ದಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಸಂಸತ್ ನಲ್ಲಿ ನಿಂತು ಅವರ ಸ್ಮರಣೆಯನ್ನು ವ್ಯಸನ ಎಂದು ತುಚ್ಛೀಕರಿಸುವ ಅಮಿತ್ ಶಾ ಧೈರ್ಯಕ್ಕೆ ಮೆಚ್ಚಿಕೊಳ್ಳಲೇ ಬೇಕು. ಈ ಮಾತನ್ನು ಕೇಳಿದ ನಂತರ ರಾಜ್ಯಸಭಾಧ್ಯಕ್ಷರು ನಿಜಕ್ಕೂ ಸಂವಿಧಾನದಡಿಯಲ್ಲಿ ಕಾರ್ಯನಿರ್ವಹಿಸುವವರಾಗಿದ್ದರೆ ತಕ್ಷಣ ಅವರನ್ನು ಸದನದಿಂದ ಅಮಾನತ್ತುಗೊಳಿಸಬೇಕಾಗಿತ್ತು ಎಂದು ಅವರು ಹೇಳಿದರು.
ಅಂಬೇಡ್ಕರ್ ಎಂಬ ಮನುಷ್ಯ ಈ ಭೂಮಿಯಲ್ಲಿ ಹುಟ್ಟದೆ ಇರುತ್ತಿದ್ದರೆ, ನನಗೆ ಮುಖ್ಯಮಂತ್ರಿಯಾಗುವ ಅವಕಾಶವೇ ಬರುತ್ತಿರಲಿಲ್ಲ, ನಾನು ಊರಲ್ಲಿ ದನ-ಕುರಿ ಮೇಯಿಸಿಕೊಂಡು ಇರಬೇಕಾಗುತ್ತಿತ್ತು. ನಮ್ಮ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಗಳನ್ನು ಪಡೆದು ಎಐಸಿಸಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿರಲಿಲ್ಲ, ಕಲಬುರ್ಗಿಯ ಯಾವುದಾದರೂ ಕಾರ್ಖಾನೆಯಲ್ಲಿ ಕಾರ್ಮಿಕರಾಗಿರುತ್ತಿದ್ದರು. ಈ ವಾಸ್ತವ ಸದಾ ನಮ್ಮ ನೆನಪಲ್ಲಿರುತ್ತದೆ ಎಂದು ಅವರು ಹೇಳಿದರು.
ನೀವು ಹೇಳುವ ವ್ಯಸನ ನಮ್ಮ ಪಾಲಿನ ಅಂಬೇಡ್ಕರ್ ಸ್ಮರಣೆ ನಮ್ಮನ್ನೆಲ್ಲ ಇಲ್ಲಿಗೆ ತಂದು ನಿಲ್ಲಿಸಿ ನಮಗೆ ಸ್ಥಾನಮಾನ, ಗೌರವ ಮತ್ತು ಜನರ ಸೇವೆ ಮಾಡುವ ಅವಕಾಶವನ್ನು ಕೊಟ್ಟಿದೆ ಎನ್ನುವುದನ್ನು ನಾವು ಮರೆತಿಲ್ಲ. ನಾನು ಮಾತ್ರ ಅಲ್ಲ, ಅಂಬೇಡ್ಕರ್ ಮತ್ತು ಅವರು ಕೊಟ್ಟಿರುವ ಸಂವಿಧಾನ ಇಲ್ಲದೆ ಇರುತ್ತಿದ್ದರೆ, ಗೃಹ ಸಚಿವರಾಗಿ ಬದುಕು ಕೊಟ್ಟ ಮಹಾತ್ಮನನ್ನೇ ತುಚ್ಛೀಕರಿಸುವ ಅವಕಾಶ ಅವರಿಗೂ ಸಿಗುತ್ತಿರಲಿಲ್ಲ. ಶಾ ನಿಮ್ಮೂರಿನಲ್ಲಿ ಎಲ್ಲಾದರೂ ಗುಜರಿ ವ್ಯಾಪಾರ ಮಾಡಿಕೊಂಡು ಇರಬೇಕಾಗುತ್ತಿತ್ತು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.