ಸಚಿವೆ ವಿರುದ್ಧ ಮಾನಹಾನಿಕರ ಹೇಳಿಕೆ ಪ್ರಕರಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರನ್ನು ಮಾನಹಾನಿಕರ ಪದ ಬಳಸಿ ನಿಂದಿಸಿದ ಆರೋಪದಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ. ರವಿ ಬಂಧನಕ್ಕೆ ಒಳಗಾಗಿರುವ ಪ್ರಕರಣ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದೆ.
ಈ ಪ್ರಕರಣ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿರುವ ಬೆಳಗಾವಿ 5ನೇ ಜೆಎಂಎಫ್ ಸಿ ನ್ಯಾಯಾಲಯವು ಸಿ.ಟಿ.ರವಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದೆ.
ಅದರಂತೆ ಪೊಲೀಸರು ಸಿ.ಟಿ.ರವಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಕರೆದೊಯ್ಯುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಹಿರೇಬಾಗೇವಾಡಿ ಪೊಲೀಸರು ಇಂದು ಬೆಳಗ್ಗೆ ಬೆಳಗಾವಿ 5ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಸಿ.ಟಿ ರವಿ ಅವರನ್ನು ಹಾಜರುಪಡಿಸಿದ್ದರು. ಈ ವೇಳೆ ವಕೀಲರು ಜಾಮೀನು ನೀಡುವಂತೆ ಮನವಿ ಮಾಡಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ ಆದೇಶ ಕಾಯ್ದಿರಿಸಿತ್ತು. ಆದರೆ, ತನಿಖಾಧಿಕಾರಿಗಳು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಕರೆದೊಯ್ಯಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು.
ಅದರಂತೆ ಬೆಳಗಾವಿ 5ನೇ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶೆ ಸ್ಪರ್ಶಾ ಡಿಸೋಜ ಅವರು ಸಿ.ಟಿ.ರವಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದ್ದಾರೆ. ಅದರಂತೆ ಟ್ರಾಂಜಿಟ್ ವಾರೆಂಟ್ ಮೇಲೆ ಪೊಲೀಸರು ಸಿ.ಟಿ ರವಿ ಅವರನ್ನ ಬೆಂಗಳೂರಿಗೆ ಕರೆದೊಯ್ಯುತ್ತಿದ್ದಾರೆ.