ಬಿಜೆಪಿಯವರ ಪ್ರತಿಭಟನೆಗೆ ಹೆದರುವುದಿಲ್ಲ : ಡಿಸಿಎಂ ಡಿ.ಕೆ.ಶಿವಕುಮಾರ್
ಬೆಳಗಾವಿ : "ನಾನಿನ್ನೂ ಸತ್ತಿಲ್ಲ, ಬದುಕಿದ್ದೇನೆ. ಈ ಡಿ.ಕೆ.ಶಿವಕುಮಾರ್ ಇನ್ನೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದಾನೆ. ಬಿಜೆಪಿಯವರ ಪ್ರತಿಭಟನೆಗೆ ನಾನು ಹೆದರುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಳಗಾವಿಯಲ್ಲಿ ಶತಮಾನೋತ್ಸವ ಕಾರ್ಯಕ್ರಮ ಆಚರಣೆ ವೇಳೆ ಬಿಜೆಪಿಯವರು ಪ್ರತಿಭಟನೆಗೆ ಮುಂದಾಗಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, "ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ನೀಡಿದ್ದಾರೆ. ಇದೆಲ್ಲವೂ ಅವರ ನೇತೃತ್ವದ ಹೋರಾಟದ ಫಲ. ಇದೆಲ್ಲವನ್ನು ಉಳಿಸಿಕೊಂಡು ಸರಿಯಾದ ರೀತಿಯಲ್ಲಿ ಜಾರಿಯಲ್ಲಿಡಬೇಕು. ಗಾಂಧೀಜಿ ಅವರನ್ನು ದಿನನಿತ್ಯ ನೆನೆಯಬೇಕು ಎಂಬ ಕಾರಣಕ್ಕೆ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರವನ್ನು ನೋಟುಗಳ ಮೇಲೆ ಮುದ್ರಣ ಮಾಡಲಾಗಿದೆ. ಮಹಾತ್ಮಾ ಎಂಬ ಹೆಸರು ಪಡೆದ ನಾಯಕನ ಸ್ಮರಣೆ ಮಾಡುವ ಆಚರಣೆ ವೇಳೆ ಪ್ರತಿಭಟನೆ ಮಾಡುತ್ತೇವೆ ಎಂದರೆ ನಾವು ಹೆದರುತ್ತೇವೆಯೇ?” ಎಂದು ಸವಾಲೆಸೆದರು.
ರಾಜ್ಯದಲ್ಲಿ ಏನೇ ನಡೆದರೂ ಡಿ.ಕೆ.ಶಿವಕುಮಾರ್ ಕಾರಣ ಎಂಬ ರೀತಿ ಬಿಂಬಿಸಲಾಗುತ್ತಿದೆ ಎಂದು ಕೇಳಿದಾಗ, “ನೀವು ಬಲಿಷ್ಠರಾಗಿದ್ದಷ್ಟು ಹೆಚ್ಚು ಶತ್ರುಗಳು. ನೀವು ಕಡಿಮೆ ಶಕ್ತಿಶಾಲಿಯಾದರೆ ಕಡಿಮೆ ಶತ್ರುಗಳು, ನೀವು ದುರ್ಬಲರಾಗಿದ್ದರೆ ಯಾವುದೇ ಶತ್ರುಗಳಿರುವುದಿಲ್ಲ. ಹೆಚ್ಚು ಕೆಲಸ ಮಾಡಿದಷ್ಟು ಹೆಚ್ಚು ತಪ್ಪುಗಳು, ಕಡಿಮೆ ಕೆಲಸ ಮಾಡಿದಷ್ಟು ಕಡಿಮೆ ತಪ್ಪುಗಳು, ಕೆಲಸಗಳೇ ಮಾಡದಿದ್ದರೆ ತಪ್ಪುಗಳೇ ಇರುವುದಿಲ್ಲ” ಎಂದು ತಿಳಿಸಿದರು.