ರುದ್ರಣ್ಣ ಆತ್ಮಹತ್ಯೆ ಪ್ರಕರಣ | ನಿಷ್ಪಕ್ಷಪಾತವಾಗಿ ತನಿಖೆ ಆಗಲಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ : ಬೆಳಗಾವಿಯ ತಹಸೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡವಣ್ಣವರ ಸಾವಿನ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ಆಗಲಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʼರುದ್ರಣ್ಣ ಯಡವಣ್ಣವರ ಸಾವಿನ ವಿಷಯ ಅತ್ಯಂತ ದುಃಖ ತರುವಂತಹದು. ಇದೊಂದು ದುರದೃಷ್ಟಕರ ಘಟನೆ. ಇಂತಹ ಘಟನೆಗಳು ನಡೆಯಬಾರದು. ರುದ್ರಣ್ಣವರ ಕುಟುಂಬಕ್ಕೆ ನ್ಯಾಯ ಸಿಗಬೇಕುʼ ಎಂದು ಹೇಳಿದರು.
ರುದ್ರಣ್ಣ ಸಾವಿನ ಘಟನೆ ಬಗ್ಗೆ ಮಾಧ್ಯಮಗಳಿಂದ ನಾನು ತಿಳಿದಿದ್ದೇನೆ. ಈ ಬಗ್ಗೆ ನನಗೂ ಹೆಚ್ಚೇನು ಮಾಹಿತಿ ಇಲ್ಲ. ಈ ಸಾವಿನ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್ ಪಾತ್ರವಿಲ್ಲವೆಂದು ಅವರೇ ಹೇಳಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಏನೂ ಗೊತ್ತಿಲ್ಲ ಎಂದಿರುವ ವಿಡೀಯೋವನ್ನು ಮಾಧ್ಯಮಗಳ ಮೂಲಕ ಗಮನಿಸಿದ್ದೇನೆ. ಈ ಬಗ್ಗೆ ಸತ್ಯಾಸತ್ಯತೆ ಜನರಿಗೆ ತಿಳಿಯಬೇಕು. ಆ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದರು.