ಯತ್ನಾಳ್ ನೀಡುವ ಹೇಳಿಕೆಗಳು ಅವರಿಗೆ ಶೋಭೆ ತರುವುದಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ವೈಯಕ್ತಿಕವಾಗಿ ನನಗೆ ಗೌರವವಿದೆ. ಆದರೆ, ಅವರು ರಾಜಕೀಯವಾಗಿ ನೀಡುವಂತಹ ಹೇಳಿಕೆಗಳು ಅವರಿಗೆ ಶೋಭೆ ತರುವಂತದ್ದಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್‍ನವರೆ ದಾಖಲೆಗಳನ್ನು ನೀಡುತ್ತಿದ್ದಾರೆ ಎಂದು ಯತ್ನಾಳ್ ಮಾಡಿರುವ ಆರೋಪದ ಕುರಿತು ಬುಧವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಯತ್ನಾಳ್ ಈ ಹಿಂದೆ ಬಿಜೆಪಿ ಸರಕಾರದಲ್ಲಿ ಮುಖ್ಯಮಂತ್ರಿ ಆಗಲು 2 ಸಾವಿರ ಕೋಟಿ ರೂ., ಸಚಿವರಾಗಲು 500 ಕೋಟಿ ರೂ. ಹೈಕಮಾಂಡ್‍ಗೆ ಕೊಡಬೇಕು ಎಂದು ಹೇಳಿದ್ದರು. ಆದರೆ, ಅವರು ಎಲ್ಲಿಂದ ವಿಷಯ ಸಂಗ್ರಹಿಸುತ್ತಾರೆ, ಯಾಕೆ ಹೀಗೆ ಮಾತನಾಡುತ್ತಾರೆ ಎನ್ನುವುದೇ ವಿಚಿತ್ರ. ಇದಕ್ಕೆ ಯತ್ನಾಳ್ ಅವರೇ ಉತ್ತರಿಸುವುದು ಸೂಕ್ತ ಎಂದು ಅವರು ಹೇಳಿದರು.
ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೈಸೂರು ಪಾದಯಾತ್ರೆ ಮಾಡುತ್ತಿದ್ದಾರೆ ಮತ್ತು ಡಿಕೆಶಿ ಋಣ ತೀರಿಸಲು ವಿಜಯೇಂದ್ರ ಹೊರಟಿದ್ದಾರೆಂದು ಯತ್ನಾಳ್ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಅವರ ಕನಸಿನಲ್ಲಿ ಅಂತಹ ವಿಚಾರ ಬಂದಿರಬೇಕು. ನಾವಂತೂ ಕಾಂಗ್ರೆಸ್ ನವರು. ಬಿಜೆಪಿಯವರು ನಮಗೆ ಸಹಾಯ ಮಾಡತ್ತಾರೆ ಎಂದರೆ, ನಮಗೆ ಅದರ ಬಗ್ಗೆ ಏನೂ ಗೊತ್ತಾಗುತ್ತಿಲ್ಲ. ನಮ್ಮ ಸಿಎಂ ಮಾಡಲು ಅವರು ಯಾರು ಎಂದು ಪ್ರಶ್ನಿಸಿದರು.