ಬೆಳಗಾವಿ ಅಧಿವೇಶನ ನೆಪದಲ್ಲಿ ಸರಕಾರವು ಎರಡು ವಾರ ಉತ್ತರ ಕರ್ನಾಟಕ ಭಾಗವನ್ನು ಪ್ರವಾಸಿತಾಣ ಮಾಡಿಕೊಂಡಿದೆ : ಶರಣಗೌಡ ಕಂದಕೂರು
ಬೆಳಗಾವಿ(ಸುವರ್ಣ ವಿಧಾನಸೌಧ) : ‘ಮುಂಬರಲಿರುವ ಬೆಳಗಾವಿಯ ವಿಧಾನ ಮಂಡಲ ಅಧಿವೇಶನದಲ್ಲಿ ನಾನು ಸರಕಾರದ ಯಾವುದೇ ಸಲವತ್ತುಗಳನ್ನು ಪಡೆಯುವುದಿಲ್ಲ. ಒಂದು ಕಪ್ ಕಾಫಿಯನ್ನೂ ಕುಡಿಯದೆ ನನ್ನ ಸ್ವಂತ ಖರ್ಚಿನಲ್ಲಿ ಸದನಕ್ಕೆ ಬಂದು ಹೋಗುತ್ತೇನೆ’ ಎಂದು ಜೆಡಿಎಸ್ ಸದಸ್ಯ ಶರಣಗೌಡ ಕಂದಕೂರು ಪ್ರಕಟಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ‘ಉತ್ತರ ಕರ್ನಾಟಕ ಅಭಿವೃದ್ಧಿ ಮೇಲಿನ ವಿಶೇಷ ಚರ್ಚೆ’ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಉತ್ತರ ಕರ್ನಾಟಕ ಅಭಿವೃದ್ಧಿಗೆ ಸಂಬಂಧಿಸಿದ ಚರ್ಚೆಗೆ ಅವಕಾಶ ನೀಡಿರುವುದಕ್ಕೆ ಧನ್ಯವಾದ ಹೇಳುವುದಿಲ್ಲ. ಏಕಂದರೆ, ಬೆಳಗಾವಿ ಅಧಿವೇಶನ ನೆಪದಲ್ಲಿ ಸರಕಾರವು ಎರಡು ವಾರ ಉತ್ತರ ಕರ್ನಾಟಕ ಭಾಗವನ್ನು ಪ್ರವಾಸಿತಾಣ ಮಾಡಿಕೊಂಡಿದೆ. ಡಿ.19ಕ್ಕೆ ಕಲಾಪ ಮುಕ್ತಾಯವಾಗಲಿದೆ.
ಪ್ರತಿವರ್ಷ ಬೆಳಗಾವಿಯಲ್ಲೇ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಉತ್ತರ ಕರ್ನಾಟಕ ಅಭಿವೃದ್ಧಿ ಸಂಬಂಧ ಚರ್ಚೆ ನಡೆಯುತ್ತಿದೆಯೇ ಹೊರತು, ಅದರ ಫಲಿತಾಂಶ ಶೂನ್ಯ. ಸರಕಾರ ಉತ್ತರ ನೀಡುತ್ತದೆಯೇ ಹೊರತು ಅಭಿವೃದ್ಧಿ ದೃಷ್ಟಿಯಿಂದ ಯಾವುದೇ ವಿಚಾರಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಉತ್ತರ ಕರ್ನಾಟಕ ಭಾಗದ 91 ಶಾಸಕರು ವಿಧಾನಸಭೆಗೆ ಆಯ್ಕೆಯಾಗಿದ್ದು, ಈ ಪೈಕಿ 41 ಕಲ್ಯಾಣ ಕರ್ನಾಟಕ ಭಾಗದವರು ಮತ್ತು 50 ಕಿತ್ತೂರು ಕರ್ನಾಟಕ ಭಾಗದವರಾಗಿದ್ದಾರೆ ಎಂದು ಅವರು ತಿಳಿಸಿದರು.
ಬೆಳಗಾವಿಯಲ್ಲಿ ನಡೆಯುವ ಪ್ರತಿ ಅಧಿವೇಶನಕ್ಕೆ ಸರಕಾರ 25ಕೋಟಿ ರೂ.ವೆಚ್ಚ ಮಾಡುತ್ತಿದೆ. ಹೀಗಾಗಿ ಮುಂದಿನ ಅಧಿವೇಶನದಲ್ಲಿ ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳುವುದಿಲ್ಲ. ಸ್ವಂತ ಖರ್ಚಿನಲ್ಲಿಯೇ ಬಂದು ಹೋಗುತ್ತೇನೆ. ಕಳೆದ ಬಾರಿಯ ಚರ್ಚೆಯಲ್ಲಿ ಮಾತನಾಡಿ ಕ್ಷೇತ್ರದ ಜನರು, ಸಾಮಾಜಿಕ ಜಾಲತಾಣ, ಮಾಧ್ಯಮ ಸೇರಿ ಎಲ್ಲ ಕಡೆ ಪ್ರಚಾರ ತೆಗೆದುಕೊಂಡು ಒಂದು ದಿನದ ನಾಯಕನಾದೆ. ಆದರೆ, ಕೆಲಸಗಳು ಮಾತ್ರ ಆಗಲಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಶಾಸಕರ ಸಚಿವರ ಹೆಸರಲ್ಲಿ ಹಣ ವಸೂಲಿ ದಂಧೆ ನಡೆಯುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಗುಂಡಿಟ್ಟು ಶೂಟ್ ಮಾಡ್ತಾರೆ: ‘ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸದಿದ್ದರೆ ಜನಪ್ರತಿನಿಧಿಗಳಿಗೆ ಅವರು ಗುಂಡಿಟ್ಟು ಶೂಟ್ ಮಾಡುತ್ತಾರೆ’ ಎಂದು ಶರಣಗೌಡ ಕಂದಕೂರು ಪದ ಬಳಕೆಗೆ ಆಕ್ಷೇಪಿಸಿದ ಕಾಂಗ್ರೆಸ್‍ನ ಹಿರಿಯ ಸದಸ್ಯ ಬಸವರಾಜ ರಾಯರೆಡ್ಡಿ, ‘ಈ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ’ ಎಂದರು. ಬಳಿಕ ಆ ಪದವನ್ನು ಕಡತದಿಂದ ತೆಗೆದುಹಾಕಬೇಕೆಂಬ ಆಗ್ರಹವು ಕೇಳಿಬಂದಿತ್ತು.
ಬಳಿಕ ಮಾತು ಮುಂದುವರಿಸಿದ ಶರಣಗೌಡ ಕಂದಕೂರು, ‘ಯಾದಗಿರಿ ಜಿಲ್ಲೆಗೆ ಯಾವುದೇ ಕೈಗಾರಿಕೆಗಳಿಲ್ಲ. ಅಲ್ಲದೆ, ಜಿಲ್ಲೆಯಲ್ಲಿ ಐವರು ಬಾಣಂತಿಯರ ಸಾವು ಮತ್ತು ಅವರ ಮಕ್ಕಳ ಸ್ಥಿತಿ, ಕ್ಷೇತ್ರದ ಸಮಸ್ಯೆ ಬಗೆಹರಿಸದಿದ್ದರೆ ಮತ ಕೇಳಲು ಹೋದಾಗ ಬಂದೂಕಿಟ್ಟು ಶೂಟ್ ಮಾಡುತ್ತಾರೆ ಎಂದರು.
ಬಳಿಕ ಮಧ್ಯಪ್ರವೇಶಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ‘ಕ್ಷೇತ್ರದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವಾಗ ಸಹಜವಾಗಿ ಆಕ್ರೋಶವಾದ ಮಾತುಗಳನ್ನಾಡಿದ್ದಾರೆ. ಅದಕ್ಕೆ ಬೇರೆಯದನ್ನು ಅರ್ಥೈಸಬಾರದು. ಅತ್ಯಾಚಾರ ಪ್ರಕರಣದ ಆರೋಪಿ ವಿರುದ್ಧ ಕಠಿಣ ಶಿಕ್ಷೆ ಕೈಗೊಳ್ಳಬೇಕು ಎಂಬುದು ಅವರ ಉದ್ದೇಶ’ ಎಂದು ಹೇಳಿದರು.