ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವನ್ನು ನೋಡುವುದು ನನ್ನ ಕನಸು: ವಿಧಾನಸಭಾ ಚುನಾವಣೆಗೆ 6 ಗ್ಯಾರಂಟಿ ಘೊಷಿಸಿದ ಸೋನಿಯಾ
ಹೈದರಾಬಾದ್ : ತೆಲಂಗಾಣದಲ್ಲಿ ಸಮಾಜದ ಎಲ್ಲಾ ವರ್ಗದ ಜನರಿಗಾಗಿ ಕೆಲಸ ಮಾಡುವ ಪಕ್ಷದ ಸರ್ಕಾರವನ್ನು ನೋಡುವುದು ನನ್ನ ಕನಸು. ಹಾಗಾಗಿ ವಿಧಾನ ಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಕಾಂಗ್ರೆಸ್ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ರವಿವಾರ ಮನವಿ ಮಾಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಇಲ್ಲಿಗೆ ಸಮೀಪದ ತುಕ್ಕುಗುಡಾದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ನಾವು 6 ಗ್ಯಾರಂಟಿಗಳನ್ನು ಘೋಷಿಸುತ್ತಿದ್ದೇವೆ. ಅವುಗಳಲ್ಲಿ ಪ್ರತಿಯೊಂದನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ" ಎಂದು ಹೇಳಿದರು.
ಮಹಾಲಕ್ಷ್ಮಿ ಯೋಜನೆ ಅಡಿಯಲ್ಲಿ ತೆಲಂಗಾಣದಲ್ಲಿ ಮಹಿಳೆಯರಿಗೆ ಮಾಸಿಕ 2,500 ರೂ. ಆರ್ಥಿಕ ನೆರವು, 500 ರೂ.ಗೆ ಗ್ಯಾಸ್ ಸಿಲಿಂಡರ್ ಮತ್ತು ರಾಜ್ಯಾದ್ಯಂತ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡುವ ಅವಕಾಶ ನೀಡಲಾಗುವುದು ಎಂದು ಅವರು ಕೆಲವು ಗ್ಯಾರಂಟಿಗಳನ್ನು ವಿವರಿಸಿದರು.
"ನಾನು, ನನ್ನ ಸಹೋದ್ಯೋಗಿಗಳು ಈ ಮಹಾನ್ ರಾಜ್ಯವಾದ ತೆಲಂಗಾಣದ ಉದಯಕ್ಕೆ ಕಾರಣರಾಗಿದ್ದೇವೆ. ಈಗ, ರಾಜ್ಯವನ್ನು ಉತ್ತುಂಗಕ್ಕೆ ಏರಿಸುವುದು ನಮ್ಮ ಕರ್ತವ್ಯ" ಎಂದು ಆಂಧ್ರಪ್ರದೇಶ ರಾಜ್ಯದ ವಿಭಜನೆ, ತೆಲಂಗಾಣದ ಉದಯವನ್ನು ಸೋನಿಯಾ ಗಾಂಧಿಯವರು ನೆನಪಿಸಿಕೊಂಡರು.
ಕರ್ನಾಟಕದ ಚುನಾವಣೆಯಲ್ಲಿ ಗ್ಯಾರಂಟಿ ಬಲದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ತೆಲಂಗಾಣದಲ್ಲಿ ಅದೇ ಮಾದರಿ ಅನುಸರಿಸಲು ಮುಂದಾಗಿದೆ. ರವಿವಾರ ಹೈದರಾಬಾದ್ ನಲ್ಲಿ ಸಿ ಡಬ್ಲ್ಯೂಸಿ ಸಭೆಯಲ್ಲಿ ಮುಂಬರುವ ಚುನಾವಣಾ ಕಾರ್ಯತಂತ್ರಗಳ ಕುರಿತು ಕಾಂಗ್ರೆಸ್ ಚರ್ಚಿಸಿತ್ತು.