ಚಾಮರಾಜನಗರ | ಅಂತ್ಯಕ್ರಿಯೆಗೆ ತೆರಳಿದ್ದ ವೇಳೆ ಹೆಜ್ಜೇನು ದಾಳಿ : 40 ಮಂದಿಗೆ ಗಾಯ

Update: 2024-07-06 14:42 GMT
ಸಾಂದರ್ಭಿಕ ಚಿತ್ರ (PC : Meta AI)

ಚಾಮರಾಜನಗರ : ಅಂತ್ಯಕ್ರಿಯೆಗೆ ತೆರಳಿದ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಸುಮಾರು 40 ಮಂದಿ ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಸವಾಪುರ ಗ್ರಾಮದಲ್ಲಿ ವರದಿಯಾಗಿದೆ.

ಬಸವಾಪುರ ಗ್ರಾಮದಲ್ಲಿ ಸುಮಾರು 40 ಮಂದಿಯ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ಇದರಲ್ಲಿ 19ಕ್ಕೂ ಹೆಚ್ಚು ಜನರು ಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಉಳಿದವರು ಹಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ವಿವರ : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಸವಾಪುರ ಗ್ರಾಮದ ವೃದ್ಧರೊಬ್ಬರು ನಿಧನ ಹೊಂದಿದ ಹಿನ್ನೆಲೆ ಅಂತ್ಯಕ್ರಿಯೆಗೆ ಸ್ಮಶಾನಕ್ಕೆ ಮೃತ ದೇಹವನ್ನು ಗ್ರಾಮಸ್ಥರು ಕೊಂಡೊಯ್ದಿದ್ದಾರೆ. ಚಿತೆಗೆ ಬೆಂಕಿ ಹಚ್ಚುವ ವೇಳೆ ಹೊಗೆ ಎದ್ದ ಪರಿಣಾಮ ಮರದಲ್ಲಿದ್ದ ಹೆಜ್ಜೇನು ದಾಳಿ ನಡೆಸಿದ್ದು, ಶವ ಸಂಸ್ಕಾರಕ್ಕೆ ತೆರಳಿದ ಸುಮಾರು 40 ಮಂದಿಗೆ ಕಚ್ಚಿದೆ. ಈ ವೇಳೆ ಹಲವು ಮಂದಿ ದಿಕ್ಕಾಲಾಗಿ ಓಡಿದ್ದಾರೆ. ಇದರಿಂದ ಕಡಿತಕ್ಕೋಳಗಾದವರ ಮುಖ, ಕೈ ಊದಿಕೊಂಡಿದೆ. ಇದರಲ್ಲಿ ಕೆಲವರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News