ಚಾಮರಾಜನಗರ ಜಿಲ್ಲಾಧಿಕಾರಿ ವಸತಿ ಗೃಹದ ಆವರಣದಿಂದ ಶ್ರೀಗಂಧದ ಮರಗಳ ಕಳವಿಗೆ ವಿಫಲ ಯತ್ನ

Update: 2024-11-18 05:50 GMT

ಚಾಮರಾಜನಗರ: ಚಾಮರಾಜನಗರದ ನ್ಯಾಯಾಲಯ ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ವಸತಿ ಗೃಹದ ಉದ್ಯಾನವನದಿಂದ ಶ್ರೀಗಂಧದ ಮರಗಳ ಕಳವಿಗೆ ಯತ್ನಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ವಸತಿ ಗೃಹದ ಗಾರ್ಡನ್ ನಲ್ಲಿ ಬೆಳೆದಿರುವ ನಾಲ್ಕು ಶ್ರೀಗಂಧದ ಮರಗಳನ್ನು ಏಳೆಂಟು ದಿನಗಳ ಹಿಂದೆ ಕದಿಯಲು ಪ್ರಯತ್ನ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ವಸತಿ ಗೃಹದ ಅಟೆಂಡರ್ ಆಗಿರುವ ಚಿನ್ನಸ್ವಾಮಿ ಎಂಬವರು ಜಿಲ್ಲಾಧಿಕಾರಿಯ ಸೂಚನೆಯಂತೆ ನ.12ರಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ನ.11ರಂದು ಅಪರಾಹ್ನ ಸುಮಾರು 3 ಗಂಟೆಯ ವೇಳೆ ಗಾರ್ಡನ್ ನಿರ್ವಹಣೆ ಮಾಡುತ್ತಿದ್ದ ಮಲ್ಲಿಕಾರ್ಜುನ ಮತ್ತು ರೇವಣ್ಣ ಎಂಬವರು ವಸತಿ ಗೃಹದ ಸುತ್ತಮುತ್ತ ಬೆಳೆದಿರುವ ಶ್ರೀಗಂಧದ ಮರಗಳನ್ನು ಯಾರೋ ಕೊಯ್ದು ಕಳ್ಳತನಕ್ಕೆ ಯತ್ನಿಸಿರುವುದನ್ನು ಗಮನಿಸಿ ಅಟೆಂಡರ್ ಚಿನ್ನಸ್ವಾಮಿಯ ಗಮನಕ್ಕೆ ತಂದಿದ್ದಾರೆ. ಅದರಂತೆ ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ವಸತಿ ಗೃಹದ ಪಶ್ಚಿಮ ಭಾಗದ ಕಾಂಪೌಂಡ್ ಬಳಿ ಇರುವ 3 ಶ್ರೀಗಂಧದ ಮರಗಳನ್ನು ಸ್ವಲ್ಪ ಸ್ವಲ್ಪ ಕೊಯ್ದಿದ್ದು, ಆಗ್ನೇಯ ಮೂಲೆಯಲ್ಲಿ ಕಾಂಪೌಂಡ್ ಹತ್ತಿರ ಬೆಳೆದಿರುವ ಒಂದು ಶ್ರೀಗಂಧದ ಮರವನ್ನು ಸ್ವಲ್ಪ ಕೊಯ್ದು ಅಲ್ಲೇ ಬಿಟ್ಟು ಹೋಗಿರುವುದು ಕಂಡುಬಂದಿದೆ. ಈ ವಿಚಾರವನ್ನು ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗಿದ್ದು, ಅವರ ಸೂಚನೆಯಂತೆ ಚಿನ್ನಸ್ವಾಮಿಯವರು ಪೊಲೀಸ್ ದೂರು ನೀಡಿದ್ದಾರೆ. ನ.10ರಂದು ರಾತ್ರಿ ಈ ಘಟನೆ ನಡೆದಿರುವ ಸಾಧ್ಯತೆಯಿದೆ ಎಂದು ಚಿನ್ನಸ್ವಾಮಿ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ದೂರಿನಂತೆ ನ.12ರಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News