ಚಾಮರಾಜನಗರ | ಪತ್ರಕರ್ತನಿಗೆ ಬೆದರಿಕೆ-ಹಲ್ಲೆ ಆರೋಪ: ಮೆಡಿಕಲ್ ಕಾಲೇಜು ಡೀನ್ ಸಹಿತ 8 ಮಂದಿ ವಿರುದ್ಧ ಪ್ರಕರಣ ದಾಖಲು

Update: 2024-08-31 11:47 GMT

ಸಾಂದರ್ಭಿಕ ಚಿತ್ರ

ಚಾಮರಾಜನಗರ : ಮೆಡಿಕಲ್ ಕಾಲೇಜು ಮತ್ತು ಭೋದನಾ ಆಸ್ಪತ್ರೆಗೆ ಸಂಬಂಧಿಸಿದಂತೆ ಹಲವಾರು ಮಾಹಿತಿಗಳನ್ನು ಮಾಹಿತಿ ಹಕ್ಕಿನಡಿ ಕೋರಿದ್ದ ಪತ್ರಕರ್ತರೊಬ್ಬರ ಮೇಲೆ ಹಲ್ಲೆ, ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೆಡಿಕಲ್ ಕಾಲೇಜು ಡೀನ್ ಸಹಿತ 8 ಮಂದಿ ನೌಕರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಚಾಮರಾಜನಗರ ಯಡಪುರ ಬಳಿ ಇರುವ ಮೆಡಿಕಲ್ ಕಾಲೇಜು ಮತ್ತು ಭೋದನಾ ಆಸ್ಪತ್ರೆಗೆ ಸಂಬಂಧಿಸಿದಂತೆ ಪತ್ರಕರ್ತ ಗೂಳೀಪುರದ ಮಣಿಕಂಠ ಎಂಬವರು ಮಾಹಿತಿ ಹಕ್ಕು ಅಡಿ (RTI) ಮಾಹಿತಿ ಕೋರಿದ್ದರು. ಮಾಹಿತಿ ನೀಡುವ ನೆಪದಲ್ಲಿ ಕಛೇರಿಗೆ ಕರೆಸಿಕೊಂಡ ಮೆಡಿಕಲ್ ಕಾಲೇಜಿನ ಡೀನ್ ಮಂಜುನಾಥ್ ಮತ್ತು ನೌಕರರು ಪತ್ರಕರ್ತ ಮಣಿಕಂಠನ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಮಾನಸಿಕ ಹಿಂಸೆ ನೀಡಿ ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಹಿಳಾ ನೌಕರರಿಂದ ದೂರು ಕೊಡಿಸಿ ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ.

ಇದರ ಬಗ್ಗೆ ಪತ್ರಕರ್ತ ಮಣಿಕಂಠ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಸಮಿತಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುಂದೆ ವಿವರಣೆ ನೀಡಿದಾಗ ಮತ್ತೊಮ್ಮೆ ದೂರು ನೀಡುವಂತೆ ಪತ್ರಕರ್ತ ಮಣಿಕಂಠರವರಿಗೆ ಸೂಚಿಸಲಾಗಿತ್ತು. ಅದರಂತೆ ಪತ್ರಕರ್ತ ಮಣಿಕಂಠ ದೂರು ದಾಖಲು ಮಾಡಿದ ಹಿನ್ನಲೆಯಲ್ಲಿ, ಹಿರಿಯ ಅಧಿಕಾರಿಗಳ ಕಛೇರಿಯಿಂದ ಬಂದ ದೂರಿನನ್ವಯ ಮೆಡಿಕಲ್ ಕಾಲೇಜು ಡೀನ್ ಮಂಜುನಾಥ್ ಹೆಚ್.ಡಿ, ಆಡಳಿತ ಸಹಾಯಅಧಿಕಾರಿ ಶೈಲಜಾ, ಸಿಮ್ಸ್ ನ ನೌಕರರಾದ ಮಹೇಶ, ಶಿವರಾಜು,ಕಿರಣ್, ಪ್ರಶಾಂತ, ಮಧು, ಅಜಯ್ ರವರ ಮೇಲೆ ಭಾರತೀಯ ದಂಡ ಸಂಹಿತೆ 143,341,323,342,504, 506, 148 ಕಲಂ ಅಡಿ ಆ.28ರಂದು ಎಫ್‌ಐಆರ್ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News