ಚಾಮರಾಜನಗರ: ಕಾಡಾನೆ ದಾಳಿಯಿಂದ ತಪ್ಪಿಸಲು ಯತ್ನ; ಕಾವಲುಗಾರರಿಗೆ ಗಾಯ
ಚಾಮರಾಜನಗರ : ಅರಣ್ಯ ಪ್ರದೇಶಕ್ಕೆ ಗಸ್ತಿಗೆ ತೆರಳಿದಂತಹ ವಾಚರ್ ಗಳು ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಗುಂಡಿಗೆ ಬಿದ್ದು ತೀವ್ರ ಗಾಯಗೊಂಡಿರುವ ಘಟನೆ ಹನೂರು ತಾಲ್ಲೂಕಿನ ಪಿ.ಜಿ ಪಾಳ್ಯ ಸಮೀಪದ ಗುಂಡಿಮಾಳ ಬಳಿ ಗುರುವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.
ಗಾಯಾಳುಗಳನ್ನು ಮುನಿಯಪ್ಪ, ಜಡೇಸ್ವಾಮಿ, ನಾಗರಾಜ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಮೂವರನ್ನೂ ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮಲೆಮಹದೇಶ್ವರ ವನ್ಯಧಾಮವ್ಯಾಪ್ತಿಯ ಪಿ.ಜಿ ಪಾಳ್ಯ ವಲಯ ಅರಣ್ಯ ಪ್ರದೇಶದಿಂದ ಕಾಡಾನೆಗಳು ಪ್ರತಿನಿತ್ಯ ಗುಂಡಿಮಾಳ ಗ್ರಾಮದ ಅಡ್ಡರಸ್ತೆ ಮೂಲಕ ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ತೆರಳುತ್ತವೆ.
ಮುಂಜಾಗ್ರತೆ ಕ್ರಮವಾಗಿ ನಿತ್ಯ ವಾಚರ್ ಗಳನ್ನು ಈಸ್ಥಳದಲ್ಲಿ ಯೋಜಿಸಲಾಗಿತ್ತು. ಆದರೆ ದುರಾದೃಷ್ವಶಾತ್ ಗುರುವಾರ ರಾತ್ರಿ ವಾಚರ್ ಗಳು ಕಾವಲಿಗೆ ಬರುವುದಕ್ಕೂ ಮುನ್ನವೇ ರಸ್ತೆಗೆ ಬಂದಿದ್ದ ಆನೆಗಳು ದಾಳಿಗೆ ಯತ್ನಿಸಿದ್ದು, ತಪ್ಪಿಸಿಕೊಳ್ಳಲು ಮುಂದಾದ ವಾಚರ್ ಗಳು ಆಕಸ್ಮಿಕವಾಗಿ ಪಕ್ಕದಲ್ಲಿದ್ದ ಹಳ್ಳಕ್ಕೆ ಬಿದ್ದು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಗಾಯಾಳುಗಳಿಗೆ ಪ್ರಾಣಕ್ಕೆ ಅಪಾಯವಿಲ್ಲ ಎಂದು ವಲಯ ಅರಣ್ಯಾಧಿಕಾರಿ ಶಿವರಾಮು ಮಾಹಿತಿ ನೀಡಿದ್ದಾರೆ.