ಕೊಳ್ಳೇಗಾಲ: ಹೋಲ್‌ಸೇಲ್ ಮಳಿಗೆಯಲ್ಲಿ ಬೆಂಕಿ ಆಕಸ್ಮಿಕ; ಲಕ್ಷಾಂತರ ರೂ. ನಷ್ಟ
Update: 2025-03-29 08:15 IST

ಚಾಮರಾಜನಗರ: ಕೊಳ್ಳೇಗಾಲ ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಇರುವ ಹೋಲ್‌ಸೇಲ್ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಬಟ್ಟೆ ಹಾಗೂ ಇನ್ನಿತರ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಯುಗಾದಿ ಮತ್ತು ರಂಝಾನ್ ಹಿನ್ನೆಲೆಯಲ್ಲಿ ಮಾಧವ ರತ್ನ ಹೋಲ್‌ಸೇಲ್ ಮಳಿಗೆಯಲ್ಲಿ ಹೆಚ್ಚುವರಿ ಬಟ್ಟೆ ಮತ್ತು ಇನ್ನಿತರ ವಸ್ತುಗಳನ್ನು ಮಾರಾಟಕ್ಕೆ ಸಂಗ್ರಹಣೆ ಮಾಡಲಾಗಿತ್ತು ಎನ್ನಲಾಗಿದೆ.
ಕೂಡಲೇ ಅಗ್ನಿ ಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆದರೂ ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆ ಹಾಗೂ ಇನ್ನಿತರ ವಸ್ತುಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದು ಬಂದಿದೆ.
ಬೆಂಕಿ ಅನಾಹುತಕ್ಕೆ ಕಾರಣ ಏನೆಂದು ತಿಳಿದು ಬಂದಿಲ್ಲ. ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.