ಹನೂರು | ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ; ಓರ್ವ ಮೃತ್ಯು, 30ಕ್ಕೂ ಹೆಚ್ಚು ಮಂದಿಗೆ ಗಾಯ

ಹನೂರು: ತಾಲೂಕಿನ ಬಂಡಳ್ಳಿ ಹೊರವಲಯದ ತೆಳ್ಳನೂರು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‌ವೊಂದು ಉರುಳಿ ಬಿದ್ದು ಬಸ್ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಶಾಗ್ಯ ಗ್ರಾಮದ ಜನರು ನಿಶ್ಚಿತಾರ್ಥ ಕಾರ್ಯಕ್ರಮ ನಿಮಿತ್ತ ಶಾಗ್ಯಗ್ರಾಮದಿಂದ ಖಾಸಗಿ ಬಸ್‌ನಲ್ಲಿ ಕನಕಪುರ ತಾಲೂಕಿನ ಹನಿಯೂರು ಗ್ರಾಮಕ್ಕೆ ತೆರಳಿದ್ದರು. ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿಕೊಂಡು ಶಾಗ್ಯ ಗ್ರಾಮಕ್ಕೆ ಹಿಂತಿರುಗಿ ಬರುವಾಗ ಬಂಡಳ್ಳಿ ತೆಳ್ಳನೂರು ಮಾರ್ಗದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್, ಪಲ್ಟಿಯಾಗಿ ಬಸ್ ಕ್ಲೀನರ್ ಬಸ್ಸಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಬಸ್ಸಿನಲ್ಲಿದ್ದ ಸುಮಾರು 30ಕ್ಕೂ ಹೆಚ್ಚು ಜನರ ಕೈಕಾಲುಗಳಿಗೆ ಗಾಯಗಳಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಬಸ್ಸಿನಲ್ಲಿದ್ದ ಜನರನ್ನು ಖಾಸಗಿ ವಾಹನಗಳ ಮೂಲಕ ಹನೂರು ಕಾಮಗೆರೆ ಕೊಳ್ಳೇಗಾಲ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಆಗಮಿಸಿದ ಹನೂರು ಹಾಗೂ ಕೊಳ್ಳೇಗಾಲ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ