ಚಾಮರಾಜನಗರ | ಪಾಲಾರ್‌ನ ಆದಿವಾಸಿ ಬಡಾವಣೆಗೆ ಇಲ್ಲ ವಿದ್ಯುತ್ ಸಂಪರ್ಕ ; ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ ನಿವಾಸಿಗಳು

Update: 2024-03-31 06:36 GMT

ಚಾಮರಾಜನಗರ : ಮಲೆಮಹದೇಶ್ವರ ಬೆಟ್ಟದ ಪಾಲಾರ್‌ನ ಆದಿವಾಸಿ ಬಡಾವಣೆಗೆ ವಿದ್ಯುತ್ ಸಂಪರ್ಕ ಕಲ್ಪಿಸದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ನಿವಾಸಿಗಳು ಎಚ್ಚರಿಸಿದರು.

ಜಿಲ್ಲೆಯ ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ಸಮೀಪದ ಪಾಲಾರ್‌ನಲ್ಲಿ 80 ಆದಿವಾಸಿ ಕುಟುಂಬಗಳು ವಾಸ ಮಾಡು ತ್ತಿವೆ. ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಇಲ್ಲಿಯ ತನಕ ವಿದ್ಯುತ್‌ ಸಂಪರ್ಕ ಇಲ್ಲ. 50 ಮೀ. ದೂರದಿಂದ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಅರಣ್ಯ ಇಲಾಖೆ ಬಿಡುತ್ತಿಲ್ಲ ಎಂದು ಅರಣ್ಯವಾಸಿ ಸೇವಾ ಟ್ರಸ್ಟ್‌ನ ಕಾರ್ಯಾಧ್ಯಕ್ಷ ನಾಗೇಂದ್ರ ಅಳಲು ತೋಡಿಕೊಂಡರು.

ಪಾಲಾರ್‌ನಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರವಿದೆ. 50ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹೋಗುತ್ತಾರೆ. ಮನೆಗಳಲ್ಲಿ ಕರೆಂಟ್ ವ್ಯವಸ್ಥೆ ಇಲ್ಲದ ಕಾರಣ ಮಕ್ಕಳಿಗೆ ಓದಿಕೊಳ್ಳಲು ತೊಂದರೆಯಾಗುತ್ತಿದೆ. ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿ ಮಾ.15 ರಂದು ಸೆಸ್ಕ್ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡಿದ ಪರಿಣಾಮ ಸೆಸ್ಕ್ ಇಲಾಖೆಯ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಿದ್ದಾರೆ ಎಂದರು.

ಆದರೆ, ವಿದ್ಯುತ್ ಸಂಪರ್ಕ ಕಲ್ಪಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಬಿಡುತ್ತಿಲ್ಲ. ಇದರಿಂದ ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಭಯದಿಂದ ಜೀವನ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರ ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೂ ಉಚಿತ ವಿದ್ಯುತ್ ನೀಡುತ್ತಿದೆ. ಆದರೆ, ನಮಗೆ ಕರೆಂಟ್ ವ್ಯವಸ್ಥೆ ಇಲ್ಲ ಎಂದು ಹೇಳಿದರು.

ಗೋಪಿನಾಥಂನಲ್ಲಿರುವ ಖಾಸಗಿ ರೆಸಾರ್ಟ್‌ಗೆ ವಿದ್ಯುತ್ ಸಂಪರ್ಕಕ್ಕೆ ಅನುಮತಿ ನೀಡಲಾಗಿದೆ. ಆದರೆ, ನಮಗೆ ಅನುಮತಿ ನೀಡುತ್ತಿಲ್ಲ. ಇದರಿಂದಾಗಿ ನಾವು ಪ್ರಾಣಿಗಳಿಗಿಂತ ಕಡೆಯಾಗಿದ್ದೇವೆ. ಹಾಡಿಗಳಿಗೆ ಮೂಲ ಸೌಕರ್ಯ ಒದಗಿಸದಿದ್ದ ಮೇಲೆ ಚುನಾವಣೆಯ ಅವಶ್ಯಕತೆ ಇಲ್ಲ. ಎ.1 ರಂದು ಕೊಳ್ಳೇಗಾಲದ ಡಿಎಫ್‌ಒ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿರುವ 148 ಹಾಡಿಗಳಲ್ಲೂ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಹದೇವ, ಮಧು, ಗಿರೀಶ್, ಮುರುಗೇಶ್ ಇದ್ದರು

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News