ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ವಶ

Update: 2024-04-12 02:46 GMT

ಚಾಮರಾಜನಗರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸತ್ತೇಗಾಲ ಚೆಕ್‌ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಾಣಿಕೆ ಮಾಡುತ್ತಿದ್ದ 1,57,87,000 ರೂ. ಮೌಲ್ಯದ 2 ಕೆ.ಜಿ. 170 ಗ್ರಾಂ ಚಿನ್ನಾಭರಣಗಳನ್ನು ಎಫ್.ಎಸ್.ಟಿ ತಂಡದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಚಾಮರಾಜನಗರ ಜಿಲ್ಲೆಯ ಸತ್ತೇಗಾಲ ಚೆಕ್‌ ಪೋಸ್ಟ್ ನಲ್ಲಿ ಬೆಂಗಳೂರಿನಿಂದ ಕೊಳ್ಳೆಗಾಲಕ್ಕೆ ಬರುತ್ತಿದ್ದ ಹುಂಡೈ ವೆನ್ಯೂ (ಕಾರು) ವಾಹನದಲ್ಲಿ ದಾಖಲೆಗಳಿಲ್ಲದೇ ಸಾಗಾಣಿಕೆ ಮಾಡುತ್ತಿದ್ದ ಕಾರ್ತಿಕ್ ಮತ್ತು ಚಿರಾಂತ್ ಎಂಬವರಿಂದ ಚಿನ್ನಾಭರಣಗಳನ್ನು ಎಫ್.ಎಸ್.ಟಿ ತಂಡದ ಅಧಿಕಾರಿ ಎಂ. ರವಿಶಂಕರ್ ಅವರು ಜಪ್ತಿ ಮಾಡಿದ್ದಾರೆ.

ಚಿನ್ನಾಭರಣ ಸಾಗಣೆ ಮಾಡುತ್ತಿದ್ದ ಬಗ್ಗೆ ವಿಚಾರಣೆ ಮಾಡಿದ ವೇಳೆ ಸ್ಪಷ್ಟ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಚಿನ್ನವನ್ನು ವಶಕ್ಕೆ ಪಡೆದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆದಾಯ ತೆರಿಗೆ ಇಲಾಖೆಯ ಅನ್ವೇಷಣೆ ವಿಭಾಗದ ಸಹಾಯಕ ನಿರ್ದೇಶಕರಾದ ಆರ್. ರಂಗನಾಥ್, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಾದ ಜಿ. ರಘು, ಜಿ. ದಿವಾಕರ್ ಅವರಿಂದ ತನಿಖೆ ಹಾಗೂ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಶಿಲ್ಪಾ ನಾಗ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News