ರಾಜಕಾರಣ ಮುಖ್ಯವಲ್ಲ ರಾಜ್ಯದ ಜನತೆಯ ಹಿತ, ಸುರಕ್ಷತೆ ಮುಖ್ಯ: ಡಿ.ಕೆ. ಶಿವಕುಮಾರ್

ಚಾಮರಾಜನಗರ : ಜಿಲ್ಲೆಯ ಬೇಡಿಕೆಗಳ ಬಗ್ಗೆ ಚರ್ಚೆ ಮಾಡಲೆಂದೇ ಇಡೀ ಸರ್ಕಾರವೇ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಹಲವಾರು ತೀರ್ಮಾನಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹೇಳಿದರು
ಮಾಧ್ಯಮದವರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್, ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳು ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಪ್ರಾಧಿಕಾರ ರಚನೆ ಮಾಡಿಲ್ಲ, ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಪ್ರಾಧಿಕಾರ ಮಾಡಿ, ಭಕ್ತರಿಗೆ ಅನುಕೂಲವಾಗುವ ಹಾಗೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮಲೆ ಮಹದೇಶ್ವರ ಕ್ಷೇತ್ರ ಪ್ರಾಧಿಕಾರ ಮಾಡಿದ್ದು ಕಾಂಗ್ರೆಸ್ ಸರ್ಕಾರ, ಅದೇ ರೀತಿಯಾಗಿ ಚಾಮುಂಡಿ ಬೆಟ್ಟ, ಸವದತ್ತಿ ಎಲ್ಲಮ್ಮ ಹೀಗೆ ಹಲವಾರು ಧಾರ್ಮಿಕ ಕ್ಷೇತ್ರಗಳನ್ನು ಪ್ರಾಧಿಕಾರ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದರು.
ಇಂದು (ಗುರುವಾರ) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರಕ್ಕೆ ಹೆಚ್ಚಿನ ಯೋಜನೆಗಳನ್ನು ಮಂಜೂರು ಮಾಡುವುದು, ಭಕ್ತರಿಗೆ ಅನುಕೂಲವಾಗುವ ವ್ಯವಸ್ಥೆಗಳನ್ನು ಕಲ್ಪಿಸುವುದು ಸೇರಿದಂತೆ ಹಲವಾರು ಚಿಂತನೆಗಳನ್ನು ಸಭೆಯಲ್ಲಿ ಮಂಡಿಸಿ ಅನಮೋದನೆ ಪಡೆಯಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ರಾಜಕಾರಣ ಮುಖ್ಯವಲ್ಲ ರಾಜ್ಯದ ಜನತೆಯ ಹಿತ ಮತ್ತು ಸುರಕ್ಷತೆ ಮುಖ್ಯ. ಮೇಕೆದಾಟು ಯೋಜನೆಯ ಬಳಿಕ ರಸ್ತೆ ನಿರ್ಮಾಣ ಮಾಡುವ ಚಿಂತನೆ ಇದ್ದು, ಮೇಕೆದಾಟು ಯೋಜನೆ ಅನುಷ್ಠಾನವಾದ ಬಳಿಕ ತಕ್ಷಣವೇ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು, ಪ್ರತಿ ವರ್ಷ ಮಹದೇಶ್ವರ ಬೆಟ್ಟಕ್ಕೆ ಕಾವೇರಿ ನದಿ ದಾಟಿಕೊಂಡು ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಅವರಿಗೆ ಉತ್ತಮರಸ್ತೆ ಮಾರ್ಗ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು.