ಬಿಜೆಪಿಯಿಂದಲೇ ಅನಂತ್ ಕುಮಾರ್ ಹೆಗಡೆ ಮೂಲಕ ಸಂವಿಧಾನ ಬದಲಾವಣೆಯ ಹೇಳಿಕೆ: ಸಿದ್ದರಾಮಯ್ಯ ಆರೋಪ
ಚಾಮರಾಜನಗರ, ಮಾ.12: ಬಿಜೆಪಿಯವರು ಮನುಸ್ಮೃತಿ, ಮನುವಾದದಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಸಂವಿಧಾನ ಬದಲಾವಣೆಯೇ ಬಿಜೆಪಿಯವರ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಂಸದ ಆರ್.ಧ್ರುವನಾರಾಯಣ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ತಾಲೂಕಿನ ಹೆಗ್ಗವಾಡಿ ಗ್ರಾಮಕ್ಕೆ ತೆರಳಿ ಆರ್.ಧ್ರುವನಾರಾಯಣ ರ ಸಮಾಧಿಗೆ ಪುಷ್ಪನಮನ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಸಂವಿಧಾನ ಬದಲಾವಣೆ ಕುರಿತು ಸಂಸದ ಅನಂತ್ ಕುಮಾರ್ ಹೆಗಡೆ ಮೂಲಕ ಬಿಜೆಪಿಯವರು ಹೇಳಿಕೆ ಕೊಡಿಸುತ್ತಿದ್ದಾರೆ. ಹೆಗಡೆ ಜನ ಸಾಮಾನ್ಯನಲ್ಲ. ಐದು ಬಾರಿ ಸಂಸದರಾಗಿದ್ದವರು. ಕೇಂದ್ರದ ಮಂತ್ರಿಯಾಗಿದ್ದವರು. ಸಂವಿಧಾನ ಬದಲಾವಣೆ ಕುರಿತು ಪಕ್ಷದಲ್ಲಿ ತೀರ್ಮಾನವಾಗದೇ ಹೇಳೋಕೆ ಆಗುತ್ತದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಅನಂತ ಕುಮಾರ ಹೆಗಡೆ ಈ ಹಿಂದೆಯೂ ಒಂದು ಬಾರಿ ಇದೇ ರೀತಿ ಹೇಳಿಕೆ ನೀಡಿದ್ದರು. ಆಗ ಆತನ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಬಿಜೆಪಿಯವರು ಮನುಸ್ಮೃತಿ, ಮನುವಾದದಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಸಿಎಎ ಜಾರಿ ಮಾಡಿದ್ದಾರೆ. ಧರ್ಮದ ಆಧಾರದ ಮೇಲೆ ಪೌರತ್ವ ಕೊಡುವುದಕ್ಕೆ ನಮ್ಮ ವಿರೋಧವಿದೆ ಎಂದರು.
ತಮಿಳುನಾಡಿಗೆ ನೀರು ಬಿಟ್ಟಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ನೀರಿದ್ದರೆ ಅಲ್ಲವೇ ಕೊಡೋದು. ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಕೊಡುವುದಿಲ್ಲ. ಅವೆಲ್ಲ ಸುಳ್ಳು. ನಮಗೆ ಕುಡಿಯಲು ನೀರು ಇಟ್ಟುಕೊಳ್ಳದೇ ಯಾರಿಗೂ ನೀರು ಕೊಡುವುದಿಲ್ಲ. ತಮಿಳುನಾಡಿನವರು ಕೂಡ ನೀರು ಕೇಳಿಲ್ಲ. ನೀರೆಲ್ಲಿದೆ ಕೊಡೋಕೆ ಎಂದು ಪ್ರಶ್ನಿಸಿದ ಅವರು ನೀರು ಕೊಡುವ ಪ್ರಶ್ನೆಯೇ ಇಲ್ಲ. ಕೇಂದ್ರ ಸರ್ಕಾರ ಹೇಳಿದರೂ ತಮಿಳುನಾಡು ಸರ್ಕಾರ ಕೇಳಿದರೂ ಒಂದು ಹನಿ ನೀರು ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಯೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಚಿವ ಎಚ್.ಸಿ.ಮಹದೇವಪ್ಪ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಆಗಮಿಸಿ ಸಮಾಧಿಗೆ ನಮಿಸಿದರು.