ಬಿಜೆಪಿಯ ʼಮೋದಿ ಮಾಡೆಲ್ʼ ಎಂದರೆ ಚೊಂಬು ಎಂದರ್ಥ : ಸುರ್ಜೇವಾಲ
ಚಿಕ್ಕಮಗಳೂರು : ರಾಜ್ಯದಲ್ಲಿ ಸದ್ಯ ಎರಡು ಮಾಡೆಲ್‍ಗಳಿವೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಒಂದು ಮಾಡೆಲ್ , ಬಿಜೆಪಿಯ ಮೋದಿ ಮಾಡಲ್ , ಮೋದಿ ಮಾಡೆಲ್ ಎಂದರೆ ಚೊಂಬು ಮಾಡೆಲ್ ಎಂದು ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್‍ಸಿಂಗ್ ಸುರ್ಜೇವಾಲ ವ್ಯಂಗ್ಯವಾಡಿದ್ದಾರೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ನಗರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದ ಜನರ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ 5 ಗ್ಯಾರಂಟಿ ಯೋಜನೆಗಳ ಜಾರಿಯ ಭರವಸೆ ನೀಡಿತ್ತು, ಚುನಾವಣೆ ಬಳಿಕ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ 5 ಗ್ಯಾರಂಟಿಗಳನ್ನು ಜಾರಿ ಮಾಡುವ ಮೂಲಕ ರಾಜ್ಯದ ಜನರ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡಿದೆ. ಇದು ಕಾಂಗ್ರೆಸ್ ಪಕ್ಷದ ಮಾಡೆಲ್ ಆಗಿದ್ದರೆ, ಬಿಜೆಪಿಯ ಮೋದಿ ಮಾಡೆಲ್ ಚೊಂಬು ಆಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದೆ. ಸದ್ಯ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ರಾಜ್ಯದ ಜನರಿಗೆ ರಾಜ್ಯದ 5 ಗ್ಯಾರಂಟಿಗಳೊಂದಿಗೆ ಮತ್ತೆ 5 ಗ್ಯಾರಂಟಿ ಯೋಜನೆಗಳ ಲಾಭ ಸಿಗಲಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಲ್ಲಿ, ಮಹಾಲಕ್ಷ್ಮೀ ಯೋಜನೆಯಡಿಯಲ್ಲಿ ರಾಜ್ಯದ ಪ್ರತೀ ಬಡ ಮಹಿಳೆಯ ಖಾತೆಗೆ 1ಲಕ್ಷ ರೂ. ವಾರ್ಷಿಕ ಸಹಾಯಧನ ಸಿಗಲಿದೆ. ನಿರುದ್ಯೋಗಿಗಳಿಗೆ ವಾರ್ಷಿಕ 1ಲಕ್ಷ ರೂ. ದೊರೆಯಲಿದೆ. ರಾಜ್ಯದ ರೈತರ ಸಾಲ ಮನ್ನಾ ಜತೆಗೆ ಎಂಎಸ್‍ಪಿ ಕಾಯ್ದೆಯ ಲಾಭ ಸಿಗಲಿದೆ, ರಾಜ್ಯದ ಪ್ರತೀ ಕುಟುಂಬಗಳಿಗೆ 25 ಲಕ್ಷ ರೂ. ಆರೋಗ್ಯ ವಿಮೆ ಯೋಜನೆ ಸಿಗಲಿದೆ, ನರೇಗಾ ಯೋಜನೆಯಡಿ ರಾಜ್ಯದ ಕೂಲಿ ಕಾರ್ಮಿಕರ ವೇತನ 530 ರೂ.ಗೆ ಏರಿಕೆಯಾಗಲಿದೆ. ಈ ಗ್ಯಾರಂಟಿಗಳನ್ನು ಕಾಂಗ್ರೆಸ್ ಪಣಾಳಿಕೆಯಲ್ಲಿ ಘೋಷಣೆ ಮಾಡಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಇಲ್ಲಿನ ಜನರಿಗೆ ರಾಜ್ಯದ 5 ಗ್ಯಾರಂಟಿಗಳೊಂದಿಗೆ ಕೇಂದ್ರದ 5 ಗ್ಯಾರಂಟಿಗಳ ಲಾಭ ಸಿಗಲಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಪಕ್ಷ ಎಂಬುದೇ ಇಲ್ಲ, ಇಲ್ಲಿರುವುದು ಯಡಿಯೂರಪ್ಪ ಮತ್ತು ಅವರ ಮಕ್ಕಳ ಪಕ್ಷ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದವರು ಮೂಲೆಗುಂಪಾಗಿದ್ದಾರೆ. ಬಿಜೆಪಿಯನ್ನು ಸಂಘಟಿಸಿದ್ದ ಈಶ್ವರಪ್ಪ, ಸದಾನಂದಗೌಡ ಅವರಂತಹ ನಾಯಕರನ್ನು ಯಡಿಯೂರಪ್ಪ ಮತ್ತು ಅವರ ಮಕ್ಕಳು ತುಳಿದು ಸೈಡ್‍ಲೈನ್ ಮಾಡಿದ್ದಾರೆ ಎಂದರು.