ಚಿಕ್ಕಮಗಳೂರು | ನಕ್ಸಲರ ಶರಣಾಗತಿ ಪ್ರಕ್ರಿಯೆಯಲ್ಲಿ ಸಂಧಾನಕ್ಕೆ ಸಂಪರ್ಕ ಸೇತುವಾಗಿದ್ದು ವೃದ್ಧೆ !
ಚಿಕ್ಕಮಗಳೂರು : ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ 6 ಮಂದಿ ನಕ್ಸಲರ ಶರಣಾಗತಿ ಪ್ರಕ್ರಿಯೆಯಲ್ಲಿ ಸಂಧಾನಕಾರರು ಹಾಗೂ ನಕ್ಸಲರ ನಡುವೆ ಕೊಂಡಿಯಾಗಿ ಪ್ರಮುಖ ಪಾತ್ರ ವಹಿಸಿರುವವರು ಮಲೆನಾಡು ಭಾಗದ ಓರ್ವ ಅಜ್ಜಿ ಎಂದು ವರದಿಯಾಗಿದೆ.
ಶೃಂಗೇರಿ ಸಮೀಪದ ಕಿಗ್ಗಾ ಗ್ರಾಮ ಸಮೀಪದ ಕಿತ್ತಲೆಮನೆಯ ವೃದ್ಧೆ ಗೌರಮ್ಮ (75) ಅವರು ನಕ್ಸಲ್ ಪುನರ್ವಸತಿ ಸಮಿತಿ ಮತ್ತು ಶಾಂತಿಗಾಗಿ ನಾಗರಿಕರ ವೇದಿಕೆ ಮುಖಂಡರು ಹಾಗೂ ನಕ್ಸಲರ ನಡುವೆ ಸಂಪರ್ಕ ಸೇತುವೆಯಾಗಿ ಬಹುಮುಖ್ಯ ಪಾತ್ರ ವಹಿಸಿದವರು.
ಜ.8ರಂದು ಆರು ಮಂದಿ ನಕ್ಸಲರಾದ ಮುಂಡಗಾರು ಲತಾ, ಕುತ್ಲೂರು ಸುಂದರಿ, ವನಜಾಕ್ಷಿ, ಮಾರೆಪ್ಪಆರೋಟಿ(ಜಯಣ್ಣ), ಕೆ.ವಸಂತ, ಜಿಷಾ ಎಂಬವರು ಮುಖ್ಯಮಂತ್ರಿ ಸಿದ್ದರಾಯಮಯ್ಯ ಸಮ್ಮುಖದಲ್ಲಿ ಶರಣಾಗಿದ್ದರು.
ಶರಣಾಗತಿ ಪ್ರಕ್ರಿಯೆಗೂ ಮುನ್ನ ಸಂಘಟನೆಗಳ ಮುಖಂಡರು ನಕ್ಸಲರನ್ನು ಸಂಪರ್ಕಿಸಲು ಹರಸಾಹಸಪಟ್ಟಿದ್ದರು. ಗ್ರಾಮಸ್ಥರ ನೆರವು ಪಡೆಯಲು ಮುಂದಾಗಿದ್ದರು. ಈ ವೇಳೆ ಸಂಘಟನೆಗಳ ಸದಸ್ಯರಿಗೆ ಸಿಕ್ಕವರು ಗೌರಮ್ಮ. ಮೂಲಗಳ ಪ್ರಕಾರ ನಕ್ಸಲರು ಶರಣಾಗುವ ಉದ್ದೇಶದಿಂದಲೇ ಕೇರಳದಿಂದ ಮಲೆನಾಡಿಗೆ ಬಂದಿದ್ದರು. ಆದರೆ, ಮುಖ್ಯವಾಹಿನಿಗೆ ಮರಳಲು ಅವರಿಗೆ ಸೂಕ್ತ ಸಂಪರ್ಕದ ಕೊಂಡಿ ಸಿಕ್ಕಿರಲಿಲ್ಲ ಎನ್ನಲಾಗಿದ್ದು, ಸೂಕ್ತ ಸಂದರ್ಭಕ್ಕಾಗಿ ನಕ್ಸಲರು ಕಾದಿದ್ದ ವೇಳೆಯೇ ಉಡುಪಿ ಜಿಲ್ಲೆ ಕಾರ್ಕಳ ಸಮೀಪ ನಕ್ಸಲ್ ನಾಯಕ ವಿಕ್ರಮ್‌ಗೌಡರ ಹತ್ಯೆಯಾಯಿತು ಎನ್ನಲಾಗುತ್ತಿದೆ.
ವಿಕ್ರಮ್‌ಗೌಡ ಹತ್ಯೆಗೂ ಮುನ್ನ ಸಂಧಾನ ಮಾತುಕತೆ ನಡೆದಿತ್ತು. ಆದರೆ, ಸಂವಹನ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ. ಎನ್‌ಕೌಂಟರ್ ಬಳಿಕ ಮುಂಡಗಾರು ಲತಾ ಜತೆ ಸಂಪರ್ಕವಿದ್ದ ಗೌರಮ್ಮ ಅವರಿಗೆ ಶರಣಾಗತಿಗೆ ಸಂಬಂಧಿಸಿದ ಪತ್ರವೊಂದನ್ನು ಮುಂಡಗಾರು ಲತಾ ನೀಡಿದ್ದು, ಈ ಪತ್ರವನ್ನು ಗೌರಮ್ಮ ಸಂಘಟನೆಗಳ ಮುಖಂಡರಿಗೆ ನೀಡಿದ್ದಾರೆ. ಈ ಪತ್ರದ ಬಳಿಕ ನಕ್ಸಲರು ಮತ್ತು ಸಂಧಾನಕಾರರ ನಡುವೆ ಅನೇಕ ಪತ್ರ ವ್ಯವಹಾರಗಳು ನಡೆದಿದ್ದು, ಅತ್ಯಂತ ಗುಪ್ತವಾಗಿ ಈ ಪತ್ರಗಳ ವಿನಿಮಯ ನಡೆದಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ನಕ್ಸಲರ ಶರಣಾಗತಿ ಪ್ರಕ್ರಿಯೆಗೆ ಸಹಕಾರಿಯಾಯಿತು ಎನ್ನಲಾಗಿದೆ.