ನಮ್ಮ ಮನೆಗಳನ್ನು ನೋಡಿಕೊಳ್ಳುವಂತೆ ಮಠಗಳನ್ನೂ ಕಾಪಾಡಿಕೊಳ್ಳಬೇಕು : ಡಿ.ಕೆ.ಶಿವಕುಮಾರ್

Update: 2025-01-11 18:16 GMT

ಶೃಂಗೇರಿ : ನಾವು ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ, ನಮ್ಮ ಮಠಗಳನ್ನೂ ಕಾಪಾಡಿಕೊಳ್ಳಬೇಕು. ಧರ್ಮವನ್ನು ಕಾಪಾಡುವ ಮಠಗಳಿಗೆ ನಮ್ಮ ಕೈಲಾದ ನೆರವು ನೀಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಶೃಂಗೇರಿ ಶಾರದಾ ಪೀಠದ ಜಗದ್ಗುರು ಭಾರತೀತೀರ್ಥ ಮಹಾಸ್ವಾಮೀಜಿ ಅವರು ಸನ್ಯಾಸ ಸ್ವೀಕಾರ ಮಾಡಿ 50 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಶೃಂಗೇರಿ ಪೊಟ್ಟಣದಲ್ಲಿ ಶನಿವಾರ ಏರ್ಪಡಿಸಿದ್ದ ಸುವರ್ಣ ಭಾರತೀ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಹಿರಿಯರು, ಮನೆ ಹುಷಾರು, ಮಠ ಹುಷಾರು ಎಂದು ಹೇಳಿದ್ದಾರೆ. ನಾವು ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ ನಮ್ಮ ಮಠಗಳನ್ನು ಕಾಪಾಡಿಕೊಳ್ಳಬೇಕು. ಇದು ನಮ್ಮೆಲ್ಲರ ಕರ್ತವ್ಯ. ಸಾರ್ವಜನಿಕರು ಇಲ್ಲಿಗೆ ಬಂದು ಹಾಗೆಯೇ ಹೋಗಬಾರದು, ನೂರು ರೂಪಾಯಿ ಸಂಪಾದನೆ ಮಾಡಿದ್ದರೇ, ಅದರಲ್ಲಿ ಒಂದು ರೂಪಾಯಿಯನ್ನಾದರೂ ಧರ್ಮ ಉಳಿಸುವ ಮಠಕ್ಕೆ ನೀಡಬೇಕು. ಆಗ ಮಾತ್ರ ಮಠಗಳು ಉಳಿಯಲು ಸಾಧ್ಯ ಎಂದು ಕರೆ ನೀಡಿದರು.

ಭಾರತೀತೀರ್ಥ ಮಹಾಸ್ವಾಮೀಜಿ ಸಮಾಜದಲ್ಲಿ ಧರ್ಮವನ್ನು ಉಳಿಸಲು ಸನ್ಯಾಸತ್ವ ಸ್ವೀಕರಿಸಿ 50 ವರ್ಷಗಳು ಪೂರೈಸಿವೆ. ಇವರು ಶಾರದ ಪೀಠದ 36ನೇ ಅಧ್ಯಕ್ಷರಾಗಿದ್ದಾರೆ. ಇವರಲ್ಲಿ ಶಂಕರಚಾರ್ಯರನ್ನು ಕಾಣುತ್ತಿದ್ದೇವೆ. ವಿಧುಶೇಖರಭಾರತೀ ಸ್ವಾಮೀಜಿ ದೇಶ ಸುತ್ತಿ ನಮ್ಮ ಧರ್ಮ ಕಾಪಾಡಲು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಮನುಷ್ಯನಿಗೆ ವಿದ್ಯೆ ಇದ್ದರೆ ವಿನಯ ಬರುತ್ತದೆ. ವಿನಯವಿದ್ದರೆ ಯೋಗ್ಯತೆ ಬರುತ್ತದೆ. ಯೋಗ್ಯತೆಯಿಂದ ಹಣ, ಹಣದಿಂದ ಧರ್ಮ, ಧರ್ಮದಿಂದ ಸುಖ ಪಡೆಯುತ್ತೇವೆ. ಅದರಂತೆ ಸುಖ ಪಡೆಯಲು ನಾನು ಇಲ್ಲಿಗೆ ಬಂದಿದ್ದೇನೆ. ನಾವು ನಮ್ಮ ಮನಸ್ಸಿನ ಶಾಂತಿ ಪಡೆಯಲು, ನಮ್ಮ ಕಷ್ಟಗಳ ನಿವಾರಣೆಗೆ ದೇವಾಲಯಕ್ಕೆ ಹೋಗುತ್ತೇವೆ ಎಂದರು.

ಯಾರ ಮಾತಿಗೂ ನಾವು ಅಂಜುವ ಅಗತ್ಯವಿಲ್ಲ. ನಾವು ಯಾರ ಅಣತಿಯಂತೆ ಇರುವುದೂ ಬೇಡ. ಯಾರನ್ನೂ ನಂಬಿ ನಾವು ಬದುಕುವುದೂ ಬೇಡ. ನಮ್ಮ ಜೀವನವನ್ನು ನಾವು ನಂಬಬೇಕು. ನಮ್ಮ ಧರ್ಮ, ದೇವರಲ್ಲಿ ವಿಶ್ವಾಸವಿಟ್ಟು ಬದುಕಿದಾಗ ಒಳ್ಳೆಯದಾಗುತ್ತದೆ. ಭಾರತೀ ಶ್ರೀಗಳು ಅನೇಕ ಶಿಷ್ಯಕೋಟಿಗಳನ್ನು ಬೆಳೆಸಿದ್ದಾರೆ, ವಿಧುಶೇಖರಭಾರತೀ ಸ್ವಾಮೀಜಿ ವಯಸ್ಸಿಗೆ ಅವರಲ್ಲಿರುವ ಪಾಂಡಿತ್ಯಕ್ಕೆ ನಾನು ಶರಣಾಗಿದ್ದೇನೆ. ಮುಂದಿನ ಐವತ್ತು ಅರವತ್ತು ವರ್ಷಗಳ ಕಾಲ ಈ ಮಠವನ್ನು ಇನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು ಸ್ವಾಮೀಜಿ ಮಾಡುತ್ತಾರೆ. ಧರ್ಮ ಕಾಪಾಡುವ ಕೆಲಸವನ್ನು ಅವರು ಮುಂದುವರಿಸುತ್ತಾರೆ. ನಮ್ಮ ಸಂಸ್ಕೃತಿ ಈ ದೇಶದ ಆಸ್ತಿ. ಅದನ್ನು ಕಾಪಾಡುವ ಕೆಲಸ ಮಠದಿಂದ ಆಗಲಿದೆ ಎಂದರು.

 

 Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News