ಚಿಕ್ಕಮಗಳೂರು | ಊರಿನವರನ್ನು ಕೇಳದೆ ಸಮಾರಂಭಕ್ಕೆ ಪಾತ್ರೆ ನೀಡಿದ್ದಕ್ಕೆ ಬಹಿಷ್ಕಾರ : ಆರೋಪ

ಚಿಕ್ಕಮಗಳೂರು: ಗ್ರಾಮದ ಮುಖ್ಯಸ್ಥನಾದ ನಾನು ಊರವರನ್ನು ಕೇಳದೆ ಸಮಾರಂಭಕ್ಕೆಂದು ಕೇಳಿದವರಿಗೆ ಪಾತ್ರೆ ನೀಡಿದ್ದಕ್ಕೆ ಮುಳ್ಳುವಾರೆ ಗ್ರಾಮದಲ್ಲಿ ನನ್ನ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ ಎಂದು ಗ್ರಾಮದ ನಿವಾಸಿ ಹಾಗೂ ಸಂತ್ರಸ್ತ ಎಂ.ಎಂ.ಭೈರಪ್ಪಆರೋಪಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ತಾಲೂಕು ವಸ್ತಾರೆ ಹೋಬಳಿ ಮುಳ್ಳುವಾರೆ ಗ್ರಾಮದಲ್ಲಿ ನನ್ನನ್ನು ಊರಿನ ಮುಖ್ಯಸ್ಥನನ್ನಾಗಿ ನೇಮಿಸಲಾಗಿತ್ತು. ಊರಿನಲ್ಲಿ ಮದುವೆ ಮತ್ತಿತರ ಕಾರ್ಯಗಳಿಗೆ ಬಳಸುವ ಪಾತ್ರೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದೆ. ಪಕ್ಕದ ಗ್ರಾಮವಾದ ಕೆಸರಿಕೆಯಲ್ಲಿ ಒಂದೇ ದಿವಸ3 ಮದುವೆ ಕಾರ್ಯಗಳಿದ್ದವು. ಆ ಗ್ರಾಮದವರಿಗೆ ಅಡುಗೆ ಬೇಯಿಸಲು ಪಾತ್ರೆಯ ಕೊರತೆ ಉಂಟಾಗಿದ್ದರಿಂದ ನನ್ನ ಬಳಿ ಬಂದು 3 ಪಾತ್ರೆಗಳನ್ನು ನೀಡುವಂತೆ ಮನವಿ ಮಾಡಿಕೊಂಡರು. ಅವರ ಮನವಿಗೆ ಸ್ಪಂದಿಸಿ ಪಾತ್ರೆಗಳನ್ನು ನೀಡಿರುತ್ತೇನೆ. ಪಾತ್ರೆ ನೀಡಿದ್ದಕ್ಕೆ ನನಗೆ 6ಸಾವಿರ ರೂ. ದಂಡ ವಿಧಿಸಿರುತ್ತಾರೆ. ಊರಿನವರನ್ನು ಕೇಳದೆ ಪಾತ್ರೆ ನೀಡಿದ್ದೇನೆಂದು ಆರೋಪಿಸಿ ನಮ್ಮ ಮನೆಗೆ ಯಾರೂ ಹೋಗದಂತೆ ತೀರ್ಮಾನ ಮಾಡುವ ಮೂಲಕ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ ಎಂದು ದೂರಿದರು.
ನನ್ನ ಮಗನ ಮದುವೆ ಕಾರ್ಯಕ್ಕೆ ಯಾರೂ ಬರಲಿಲ್ಲ, ಪಾತ್ರೆಯನ್ನೂ ಕೊಡಲಿಲ್ಲ, ನಮ್ಮ ಮನೆಗೆ ಗ್ರಾಮದವರು ಬಂದರೆ 5 ಸಾವಿರ ರೂ. ದಂಡ ಕಟ್ಟಬೇಕಾಗುತ್ತದೆ ಎಂದು ಗ್ರಾಮದಲ್ಲಿ ಎಚ್ಚರಿಕೆ ನೀಡಿದ್ದಾರೆಂದು ಆರೋಪಿಸಿದ ಅವರು, ಗ್ರಾಮಸ್ಥರಿಂದಾಗಿರುವ ಅನ್ಯಾಯಕ್ಕೆ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಕೋರಿದರು.