ಕೇಂದ್ರ ನಾಯಕರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಬೇಕು : ಯತ್ನಾಳ್ ಉಚ್ಚಾಟನೆಗೆ ಆರ್.ಅಶೋಕ್ ಪ್ರತಿಕ್ರಿಯೆ

ಆರ್.ಅಶೋಕ್
ಚಿಕ್ಕಮಗಳೂರು : ಕೇಂದ್ರ ನಾಯಕರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು. ಪಕ್ಷದ ವಿರುದ್ಧ ಮಾತನಾಡೋದು ಒಳ್ಳೆಯದಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಬಸವನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆಗೆ ಪ್ರತಿಕ್ರಿಯಿಸಿದರು.
ಗುರುವಾರ ನಗರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ನಿನ್ನೆಯೇ ಕೇಂದ್ರ ನಾಯಕರ ಜತೆ ಮಾತನಾಡಿದ್ದೇನೆ. ಕೇಂದ್ರದ ತೀರ್ಮಾನಕ್ಕೆ ತಲೆಬಾಗಬೇಕು. ಪಕ್ಷ ನಮಗೆ ತಾಯಿ ಇದ್ದಂತೆ. ಪಕ್ಷದ ತೀರ್ಮಾನಕ್ಕೆ ತಲೆ ಬಾಗುತ್ತೇವೆ ಎಂದರು.
ಮೃತ್ಯುಂಜಯ ಸ್ವಾಮೀಜಿ ಸಭೆ ಕರೆದಿದ್ದಾರೆ. ಯತ್ನಾಳ್ ಕೂಡ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಏನು ತೀರ್ಮಾನ ತಗೆದುಕೊಳ್ಳುತ್ತಾರೋ ನೋಡೋಣ ಎಂದು ತಿಳಿಸಿದರು. ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಕುಂಠಿತಗೊಂಡಿವೆ. ದುರಾಡಳಿತ, ಮುಸ್ಲಿಂಮರಿಗೆ ಮೀಸಲಾತಿ ನೀಡಿ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ ಎಂದರು.
ಎರಡುವರೆ ವರ್ಷಗಳ ಬಳಿಕ ಮುಖ್ಯಮಂತ್ರಿ ಬದಲಾವಣೆ ಎಲ್ಲರಿಗೂ ತಿಳಿದಿರುವ ವಿಚಾರ. ಕಾಂಗ್ರೆಸ್ ಮೂಲಗಳಿಂದಲೇ ನಮಗೆ ಬಂದಿರುವ ಮಾಹಿತಿ. ಈ ಸರ್ಕಾರ ಇದೇ ಗೊಂದಲದಲ್ಲಿ ಇರುತ್ತೋ ಬಿದ್ದು ಹೋಗುತ್ತೋ ನೋಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಗೊಂದಲದಲ್ಲಿದೆ. ಹನಿಟ್ರ್ಯಾಪ್, ಸಿ.ಎಂ.ಖುರ್ಚಿ ಹಸ್ತಾಂತರ ಏನಾಗುತ್ತೋ ಏನೋ. ಈ ಸರ್ಕಾರದಲ್ಲಿ ಸಿ.ಎಂ.ಖುರ್ಚಿ ಗಾಗಿ ಹೊಡೆದಾಟ ನಡೆಯುತ್ತಿದೆ. ಸಿದ್ದರಾಮಯ್ಯ ಖುರ್ಚಿ ಉಳಿಸಿಕೊಳ್ಳಲು, ಡಿಕೆಶಿ ಖುರ್ಚಿ ಕಿತ್ತುಕೊಳ್ಳಲು ಹೊಡೆದಾಟ ನಡೆಸುತ್ತಿದ್ದಾರೆ. ಉಳಿಸಿಕೋ, ಕಿತ್ತುಕೋ ಇವೆರೆಡರ ಮಧ್ಯೆ ಸರ್ಕಾರವಿದೆ ಎಂದು ಲೇವಡಿ ಮಾಡಿದರು.
ಹನಿಟ್ರ್ಯಾಪ್ ವಿಚಾರ ಕಾಂಗ್ರೆಸ್ ನಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ನಮ್ಮ ಮಾಹಿತಿ ಪ್ರಕಾರ ಮುಖ್ಯಮಂತ್ರಿಯೇ ಇದರ ಸೂತ್ರದಾರರು. ನದನದಲ್ಲಿ ಏಕೆ ಪ್ರಸ್ತಾಪ ಮಾಡಿದ್ರು, ಇದರಲ್ಲಿ ಕಾಂಗ್ರೆಸ್ ನ ಹಲವು ಮುಖಂಡರ ಕೈವಾಡವಿದೆ ಎಂದರು.