ಚಿಕ್ಕಮಗಳೂರು: ಬಿಸಿಲ ತಾಪಕ್ಕೆ ರೋಸಿ ಹೋಗಿದ್ದ ಜನರ ಮುಖದಲ್ಲಿ ಮಂದಹಾಸ ಮೂಡಿಸಿದ ಅಕಾಲಿಕ ಮಳೆ

ಚಿಕ್ಕಮಗಳೂರು: ಬಿಸಿಲಧಗೆಗೆ ಕಾದು ಕೆಂಡದಂತಾಗಿದ್ದ ಕಾಫಿನಾಡಿನಲ್ಲಿ ಶುಕ್ರವಾರ ಸುರಿದ ಸಾಧಾರಣ ಮಳೆ ತಂಪೆರೆಚಿತ್ತು. ನಗರ ಸೇರಿದಂತೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕೆಲ ಹೊತ್ತು ಸುರಿದ ಮಳೆ ಬಿಸಿಲಧಗೆಯಿಂದ ರೋಸಿ ಹೋಗಿದ್ದ ಜನತೆಯ ಮುಖದಲ್ಲಿ ಮಂದಹಾಸ ಮೂಡಿಸಿತು.
ಕಾಫಿನಾಡಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಿಸಿಲ ತಾಪಮಾನ ಅತ್ಯಂತ ಗರಿಷ್ಠ ಮಟ್ಟಕ್ಕೆ ತಲುಪುತ್ತಿದೆ. ಪರಿಣಾಮ ಬಿಸಿಲ ಧಗೆಗೆ ಸಾರ್ವಜನಿಕರು ರೋಸಿ ಹೋಗಿದ್ದಾರೆ. ಬಿಸಿಲ ತಾಪಮಾನದಿಂದ ಪಾರಾಗಲು ತಂಪು ಪಾನೀಯ, ಪ್ಯಾನ್, ಏಸಿ, ಛತ್ರಿಗಳ ಮೊರೆ ಹೋಗುತ್ತಿದ್ದಾರೆ.
ಭಾರೀ ಬಿಸಿಲಿನಿಂದಾಗಿ ಜಿಲ್ಲೆಯ ಮಲೆನಾಡು, ಬಯಲು ಭಾಗದಲ್ಲಿ ಬೆಳೆಗಳ ಸಂರಕ್ಷಣೆಗೆ ರೈತರು, ಬೆಳೆಗಾರರು ಹರಸಾಹಸ ಮಾಡುವಂತಾಗಿದೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಪಂಪ್‍ಸೆಟ್‍ಗಳಿಂದ ಬೆಳೆದು ನಿಂತ ಬೆಳೆಗಳಿಗೆ ನೀರು ಹಾಯಿಸಲು ಬಯಲು ಭಾಗದ ರೈತರು ಪರದಾಡುತ್ತಿದ್ದರೆ, ಕಾಫಿ, ಅಡಿಕೆ ತೋಟಗಳಿಗೆ ನೀರು ಹಾಯಿಸಲು ಬೆಳೆಗಾರರು ಹಳ್ಳಕೊಳ್ಳ, ಬಾವಿಗಳ ಮೊರೆ ಹೋಗುತ್ತಿದ್ದಾರೆ. ಭಾರೀ ಬಿಸಿಲ ಕಾರಣಕ್ಕೆ ಮಲೆನಾಡು ಭಾಗದಲ್ಲಿ ಕಾಫಿ, ಅಡಿಕೆ ತೋಟಗಳು ಒಣಗಲರಾಂಭಿಸಿದ್ದು, ಬೆಳೆ ಸಂರಕ್ಷಣೆಗಾಗಿ ಬೆಳೆಗಾರರು ಹಳ್ಳಕೊಳ್ಳಗಳಿಂದ ನೀರು ಹಾಯಿಲು ಸರ್ಕಸ್ ಮಾಡುವಂತಾಗಿದೆ.
ಈ ಮಧ್ಯೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳ ಹಿಂದೆ ಸಾಧಾರಣ ಮಳೆಯಾಗಿದ್ದು, ಇದರಿಂದ ಕಾಫಿ, ಅಡಿಕೆ, ಕಾಳುಮೆಣಸು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿತ್ತು. ಒಂದೆರೆಡು ದಿನ ಸಾಧಾರಣ ಮಳೆ ನಿರಂತರವಾಗಿ ಸುರಿದರೇ ಬೆಳೆಗಳ ರಕ್ಷಣೆ ಸಾಧ್ಯ ಎಂದುಕೊಂಡಿದ್ದ ಬೆಳೆಗಾರರಿಗೆ ಅಕಾಲಿಕ ಮಳೆಯೂ ಕೈಕೊಟ್ಟಿದ್ದರಿಂದ ನಿರಾಶೆಯಾಗಿತ್ತು. ಆದರೆ ಶನಿವಾರ ಮಧ್ಯಾಹ್ನ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಕಳಸ, ಎನ್.ಆರ್.ಪುರ, ಶೃಂಗೇರಿ ತಾಲೂಕುಗಳ ವ್ಯಾಪ್ತಿಯ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದು, ಈ ಮಳೆ ಕಾದು ಕೆಂಡವಾಗಿದ್ದ ಇಳೆಗೆ ತಂಪೆರಚಿದಂತಾಗಿದ್ದು, ಬಿಸಿಲ ತಾಪಕ್ಕೆ ಒಣಗಲಾರಂಬಿಸಿದ್ದ ಬೆಳೆಗಳಿಗೆ ಮಳೆಯ ಸಿಂಚನದಿಂದಾಗಿ ತಂಪೆರಚಿದಂತಾಗಿದೆ.
ಶನಿವಾರ ಸುರಿದ ಸಾಧಾರಣ ಮಳೆ ಕೆಲವೇ ಹೊತ್ತು ಸುರಿದಿದ್ದು, ಬೆಳೆಗಾರರು ಇನ್ನೂ ಕೆಲ ದಿನಗಳವರೆಗಾದರೂ ಅಕಾಲಿಕ ಮಳೆ ಸುರಿಯಲಿ ಎಂದು ಆಕಾಶದತ್ತ ಮುಖ ಮಾಡಿದ್ದಾರೆ. ಜಿಲ್ಲೆಯಲ್ಲಿ ಇನ್ನೂ ಕೆಲ ದಿನಗಳವರೆಗೆ ಅಕಾಲಿಕ ಮಳೆ ಸುರಿಯುವ ನಿರೀಕ್ಷೆ ಬೆಳೆಗಾರರದ್ದಾಗಿದೆ. ಚಿಕ್ಕಮಗಳೂರು ನಗರದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಸಾಧಾರಣ ಮಳೆ ಸುರಿದಿದ್ದು, ಈ ಮಳೆಗೆ ಸದ್ಯ ಇರುವ ಭಾರೀ ತಾಪಮಾನವನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಸಾಧಾರಣವಾಗಿ ಸುರಿದ ಮಳೆ ನಗರದ ಜನರಲ್ಲಿ ಸಂತಸಕ್ಕೆ ಕಾರಣವಾಗಿದ್ದರೂ ಕೆಲವೇ ಹೊತ್ತು ಸುರಿದ ಮಳೆ ಜನರಲ್ಲಿ ನಿರಾಶೆ ಮೂಡಿಸಿದೆ.