ಚಿಕ್ಕಮಗಳೂರು | ಅಪಘಾತದಲ್ಲಿ 17 ಹಲ್ಲುಗಳನ್ನು ಕಳೆದುಕೊಂಡ ನೋವಿನಲ್ಲಿ ಯುವಕ ಆತ್ಮಹತ್ಯೆ

ಮೃತ ಯುವಕ
ಚಿಕ್ಕಮಗಳೂರು : 17 ಹಲ್ಲುಗಳನ್ನು ಕಳೆದುಕೊಂಡ ನೋವಿನಲ್ಲಿ ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಭುವನಕೋಟೆ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ವಿಘ್ನೇಶ್(18) ಎಂದು ಗುರುತಿಸಲಾಗಿದೆ.
4 ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ 17 ಹಲ್ಲುಗಳನ್ನು ಕಳೆದುಕೊಂಡು ತೀವ್ರ ಶಾರೀರಿಕ ಹಾಗೂ ಮಾನಸಿಕ ನೋವು ಅನುಭವಿಸುತ್ತಿದ್ದ. ಈ ನೋವಿನಿಂದ ಮನನೊಂದು, ಅವನು ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ವಿಘ್ನೇಶ್ ಕೊಪ್ಪದಲ್ಲಿರುವ ಐಟಿಐ ಸಂಸ್ಥೆಯಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದು, ನಿರಂತರ ಚಿಕಿತ್ಸೆ ಮತ್ತು ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಬೇಸತ್ತು, ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.