ಬಾಬಾ ಬುಡಾನ್ ದರ್ಗಾ ವಿಚಾರ | ಸರಕಾರ ಸುಪ್ರೀಂ ಕೋರ್ಟ್‌ಗೆ ತನ್ನ ನಿಲುವು ತಿಳಿಸಲಿ : ಸೈಯದ್ ಫಕ್ರುದ್ದೀನ್ ಶಾ ಖಾದ್ರಿ

Update: 2025-01-12 17:29 GMT

ಚಿಕ್ಕಮಗಳೂರು : ಶ್ರೀ ಗುರು ದತ್ತಾತ್ರೇಯ ಬಾಬಾ ಬುಡಾನ್ ಸ್ವಾಮಿ ದರ್ಗಾದ ವಿಚಾರದಲ್ಲಿ ನ್ಯಾಯಬದ್ಧವಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಬಿಜೆಪಿ ಸೇರಿದಂತೆ ಹಿಂದಿನ ಸರಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. ದರ್ಗಾದ ವಿಚಾರಗಳ ಬಗ್ಗೆ ರಾಜ್ಯ ಸರಕಾರ ತನ್ನ ನಿಲುವು ತಿಳಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಸರಕಾರ ಪೂರಕ ದಾಖಲೆಗಳನ್ನು ಪರಿಶೀಲಿಸಿ ನ್ಯಾಯಾಲಯಕ್ಕೆ ತನ್ನ ನಿಲುವು ತಿಳಿಸಬೇಕು ಎಂದು ಸೈಯದ್ ಬುಡಾನ್ ಶಾ ಖಾದ್ರಿ ವಂಶಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ (ಅಜ್ಮತ್ ಪಾಷ) ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಗುರು ದತ್ತಾತ್ರೇಯ ಬಾಬಾ ಬುಡಾನ್ ಸ್ವಾಮಿ ದರ್ಗಾದ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ಲಾಭ ಪಡೆಯುವ ಕೆಲಸ ಮಾಡುತ್ತಿದ್ದರೆ, ಸಂಘಪರಿವಾರ ವಿವಾದ ಸೃಷ್ಟಿಸಿ ಕೋಮು ಸಾಮರಸ್ಯ ಹದಗೆಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕೆಂದು ಹೇಳಿದರು.

ಸಂಘಪರಿವಾರದವರು ಗುಹೆಯ ಒಳ ಭಾಗದಲ್ಲಿರುವ ಸೂಫಿ ಪಂಥದ ಗಾದಿ(ಪೀಠ), ಛಿಲ್ಲಾ(ಧ್ಯಾನ ಸ್ಥಳ), ಚಿರಾಗ್(ನಂದಾದೀಪ) ಮತ್ತು ಖಡಾವೆ(ಪಾದುಕೆ)ಗಳ ವಿಚಾರ ಮುಂದಿಟ್ಟುಕೊಂಡು ದೇಶದ ಮುಜರಾಯಿ ಇಲಾಖೆ ಅಧೀನದಲ್ಲಿರುವ ಮುಹಮ್ಮದನ್ ಸಂಸ್ಥೆಯ ಧಾರ್ಮಿಕ ಆಚರಣೆಗಳನ್ನು ಸಂಪೂರ್ಣವಾಗಿ ಬದಲಾಯಿಸುವ ಹುನ್ನಾರ ನಡೆಸುತ್ತಿದ್ದಾರೆ. ಈ ಸಂಸ್ಥೆಯ ವಿಚಾರದಲ್ಲಿ ಕೆಲ ಪಕ್ಷಗಳು ನಾವು ಅಲ್ಪಸಂಖ್ಯಾತರ ಪರ ಇದ್ದೇವೆ ಎನ್ನುತ್ತಿದ್ದರೂ ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿವೆ. ಬಿಜೆಪಿ ಪಕ್ಷ ಈ ವಿಚಾರದಲ್ಲಿ ಹಿಂದೂಗಳ ಪರ ಎಂಬಂತೆ ಬಿಂಬಿಸಿಕೊಂಡು ರಾಜಕೀಯ ಲಾಭ ಪಡೆಯುವ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿದರು.

ಮುಹಮ್ಮದನ್ ಸಂಸ್ಥೆಯಲ್ಲಿನ ಸೂಫಿ ಪಂಥದ ಆಚರಣೆಗಳನ್ನು ತಡೆಯುವ ಹುನ್ನಾರಗಳು ಇತ್ತೀಚೆಗೆ ನಡೆಯುತ್ತಿವೆ. ಇದರ ವಿರುದ್ಧ ಸರಕಾರ ಮತ್ತು ಸಂಬಂಧಿಸಿದ ಇಲಾಖಾಧಿಕಾರಿಗಳು ಮೇಲಿನ ದಾಖಲೆಗಳನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ನಮಗೆ ನ್ಯಾಯ ಒದಗಿಸಬೇಕು. ದತ್ತಾತ್ರೇಯ ಬಾಬಾ ಬುಡಾನ್ ಸ್ವಾಮಿ ದರ್ಗಾದಲ್ಲಿನ ಪೂಜೆ ಹಕ್ಕಿನ ಕುರಿತು 8 ವಾರಗಳ ಒಳಗೆ ತನ್ನ ನಿಲುವು ತಿಳಿಸಬೇಕೆಂದು ಸುಪ್ರೀಂ ಕೋರ್ಟ್ ರಾಜ್ಯ ಸರಕಾರಕ್ಕೆ ಗಡುವು ನೀಡಿದ್ದು, ಸರಕಾರ ಮೇಲಿನ ಸರಕಾರಿ ಆದೇಶ, ಮಹಾರಾಜರ ಕಾಲದ ಸರಕಾರಿ ಆದೇಶ ಹಾಗೂ ಗೆಜೆಟ್ ದಾಖಲೆಗಳನ್ನು ಪರಿಶೀಲಿಸಬೇಕು ಹಾಗೂ ನಮ್ಮೊಂದಿಗೆ ಚರ್ಚಿಸಿ ನ್ಯಾಯಾಲಯಕ್ಕೆ ಸೂಕ್ತ ನಿಲುವು ತಿಳಿಸಿ, ನ್ಯಾಯ ಒದಗಿಸಬೇಕು ಎಂದು ಶಾಖಾದ್ರಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸೈಯದ್ ನಿಝಾಮುದ್ದೀನ್ ಖಾದ್ರಿ, ಸಲೀಂ ಮಲಿಕ್, ಅರ್ಬಾಝ್, ತನ್ವೀರ್ ಅಹ್ಮದ್, ಮುಹಮ್ಮದ್ ಅತೀಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News