ʼಭೀಮಾ ಕೋರೆಗಾಂವ್ ವಿಜಯೋತ್ಸವʼ ಜಾತಿವ್ಯವಸ್ಥೆ ವಿರುದ್ಧದ ಹೋರಾಟ : ಸಂಸದ ಶಶಿಕಾಂತ್ ಸೆಂಥಿಲ್
ಚಿಕ್ಕಮಗಳೂರು : ಭೀಮಾ ಕೋರೆಗಾಂವ್ ವಿಜಯೋತ್ಸವ ಕೇವಲ ವಿಜಯೋತ್ಸವ ಕಾರ್ಯಕ್ರಮವಲ್ಲ, ಅದು ದೇಶದಲ್ಲಿ ಬಲವಾಗಿ ಬೇರೂರಿರುವ ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಆರಂಭವಾಗಿರುವ ಹೋರಾಟವಾಗಿದೆ. ಶೋಷಿತ ಸಮುದಾಯಗಳ ಸಮಾನತೆ, ಸ್ವಾತಂತ್ರ್ಯ, ಹಕ್ಕುಗಳಿಗಾಗಿ ನಡೆಯುತ್ತಿರುವ ನೀಲಿ ಕ್ರಾಂತಿಯಾಗಿದೆ ಎಂದು ಚಿಂತಕ ಹಾಗೂ ತಮಿಳುನಾಡು ಸಂಸದ ಶಶಿಕಾಂತ್ ಸೆಂಥಿಲ್ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭೀಮಾ ಕೋರೆಗಾಂವ್ ವಿಜಯೋತ್ಸವ ದೇಶದ ಮೂಲೆಮೂಲೆಯಲ್ಲೂ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ. ಈ ವಿಜಯೋತ್ಸವ ಕೇವಲ ಸಂಭ್ರಮ ಅಲ್ಲ, ಇದು ದೇಶದಲ್ಲಿ ಸಂವಿಧಾನ, ಕಾನೂನು ವ್ಯವಸ್ಥೆ ಜಾರಿಯಲ್ಲಿದ್ದರೂ ಹೆಮ್ಮರವಾಗಿ ಬೆಳೆದು ನಿಂತಿರುವ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟವಾಗಿದೆ. ಶೋಷಿತ ಸಮುದಾಯಗಳ ಮೇಲೆ ಮೇಲ್ವರ್ಗದವರು ಜಾತಿ, ಧರ್ಮ, ದೇವರ ಹೆಸರಿನಲ್ಲಿ ನಡೆಸುತ್ತಿರುವ ಅತ್ಯಾಚಾರ, ದೌರ್ಜನ್ಯ, ಅಸ್ಪೃಶ್ಯತೆಯಂತಹ ಪಿಡುಗುಗಳ ವಿರುದ್ಧದ ಹೋರಾಟವಾಗಿದೆ. ಈ ಹೋರಾಟ ಮತ್ತಷ್ಟು ತೀವ್ರವಾಗಬೇಕೆಂದರೆ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಮತ್ತಷ್ಟು ಹೆಚ್ಚಾಗಬೇಕು. ಈ ಮೂಲಕ ಶೋಷಿತ ಸಮುದಾಯದವರಲ್ಲಿ ಜಾಗೃತಿ ಮೂಡಬೇಕು ಎಂದರು.
ಸ್ವಾತಂತ್ರ್ಯಪೂರ್ವದಲ್ಲಿ ಭೀಮಾ ಕೋರೆಗಾಂವ್ ಯುದ್ಧ ನಡೆದಿದ್ದು, ಆ ಕಾಲಘಟ್ಟದಲ್ಲಿ ಜಾತಿ ವ್ಯವಸ್ಥೆಯಲ್ಲಿ ಸಿಲುಕಿದ್ದ ಶೋಷಿತ ಸಮುದಾಯಗಳ ಜನರ ಸ್ಥಿತಿ ಪ್ರಾಣಿಗಳಿಗಿಂತ ಕಡೆಯಾಗಿತ್ತು. ಅಂತಹ ಕಾಲಘಟ್ಟದಲ್ಲಿ ಅಮಾನವೀಯ ಆಚರಣೆಗಳಿಗೆ ಒಳಪಟ್ಟಿದ್ದ ಮಹರ್ ಸಮುದಾಯದ 834 ಸೈನಿಕರು ಅಪ್ಪಟ ಜಾತಿವಾದಿಗಳಾಗಿದ್ದ ಪೇಶ್ವೆಗಳ 25ಸಾವಿರ ಸೈನಿಕರನ್ನು ಕೋರೆಗಾಂವ್ ಯುದ್ಧದಲ್ಲಿ ಸದೆಬಡಿದರು. ಈ ಮೂಲಕ ತಮ್ಮ ಸಹನೆಯ ಕಟ್ಟೆಯನ್ನು ಒಡೆದು ತಮ್ಮ ಸ್ವಾಭಿಮಾನ, ಆತ್ಮಗೌರವನ್ನು ಸಾರಿದ್ದರು. ಈ ಇತಿಹಾಸವನ್ನೂ ಜಾತಿವಾದಿಗಳ ಮುಚ್ಚಿ ಹಾಕಿದ್ದರು. ಆದರೆ ಅಂಬೇಡ್ಕರ್ ಅವರ ಅರಿವಿನ ಕಣ್ಣಿನಿಂದಾಗಿ ಈ ಐತಿಹಾಸಿಕ ಯುದ್ಧ ಜಗತ್ತಿನ ಎದುರು ಇಂದಿಗೂ ಚರ್ಚೆಗೊಳಪಡುತ್ತಿದೆ ಎಂದರು.
ದೇವರು, ಧರ್ಮದ ಹೆಸರಿನಲ್ಲಿ ವೈದಿಕರು ಜಾತಿ ವ್ಯವಸ್ಥೆಯನ್ನು ಅತ್ಯಂತ ಬುದ್ಧಿಪೂರ್ವಕವಾಗಿ ಸೃಷ್ಟಿಸಿದ್ದಾರೆ. ಈ ಕಾರಣಕ್ಕೆ ಈ ಜಾತಿ ವ್ಯವಸ್ಥೆ ಇಂದಿಗೂ ನಾಶವಾಗುತ್ತಿಲ್ಲ. ಬ್ರಹ್ಮನ ಬಾಯಿಯಿಂದ, ಭುಜದಿಂದ, ಕಾಲಿನಿಂದ ಎಂಬ ಪುರಾಣ ಬರೆದು ಜಾತಿ ವ್ಯವಸ್ಥೆಯಿಂದ ನಮ್ಮನ್ನು ಹೊರ ಬಾರದಂತೆ ಮಾಡಿದ್ದಾರೆ. ಜಾತಿ ವಂಶಪಾರಂಪರ್ಯವಾಗಿರುವಂತೆ ನೋಡಿಕೊಂಡಿದ್ದಾರೆ, ಮತಾಂತರ ಆದರೇ ಹಲ್ಲೆ ಮಾಡಿ ಬೆದರಿಸುತ್ತಿದ್ದಾರೆ. ಇದೆಲ್ಲವನ್ನೂ ದೇವರು, ಧರ್ಮ ತೋರಿಸಿಯೇ ಮಾಡುತ್ತಿದ್ದಾರೆ. ಪರಸ್ಪರ ಮುಟ್ಟಿದರೂ ಮೈಲಿಗೆ ಎನ್ನುತ್ತಾರೆ ಎಂದ ಅವರು, ಈ ಜಾತಿ ವ್ಯವಸ್ಥೆಯಿಂದಾಗಿ ದಲಿತ ಮಹಿಳೆಯರಲ್ಲದೇ ಎಲ್ಲ ವರ್ಗದ ಮಹಿಳೆಯರ ಸ್ವಾತಂತ್ರ್ಯ, ಸಮಾನತೆಯನ್ನೂ ಕಿತ್ತುಕೊಂಡಿದ್ದಾರೆ. ಇಂತಹ ಜಾತಿ ವ್ಯವಸ್ಥೆ ನಿರ್ಮೂಲನೆ ಅಸಾಧ್ಯ ಎಂಬಂತ ವಾತಾವರಣ ಇದ್ದರೂ ಈ ವ್ಯವಸ್ಥೆಯಲ್ಲಿ ಶೋಷಿತರು, ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆದು ಗೌರವದಿಂದ ಬದುಕಲು ಸಾಧುವಾಗಿರಲು ಕಾರಣ ಅಂಬೇಡ್ಕರ್ ಬರೆದ ಸಂವಿಧಾನ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಕೋರೆಗಾವ್ ವಿಜಯೋತ್ಸವ ಮೆರವಣಿಗೆ ನಡೆಯಿತು. ಮಹಾನಾಯಕ ಧಾರಾವಾಹಿಯ ಅಂಬೇಡ್ಕರ್ ಪಾತ್ರಧಾರಿ ಅಥರ್ವ ಕರ್ವೆ ಕಾರ್ಯಕ್ರಮದ ಆಕರ್ಷಣೆಯಾಗಿದ್ದರು. ದಲಿತ ಸಂಘಟನೆಗಳ ಒಕ್ಕೂಟದ ದಂಟರಮಕ್ಕಿ ಶ್ರೀನಿವಾಸ್, ಕೆ.ಟಿ.ರಾಧಾಕೃಷ್ಣ, ವಕೀಲ ಅನಿಲ್ ಕುಮಾರ್, ಭೀಮ್ ಆರ್ಮಿಯ ಗೌರವಾಧ್ಯಕ್ಷಹೊನ್ನೇಶ್, ಭೀಮಯ್ಯ, ಹರೀಶ್, ಮತ್ತಿಕೆರೆ ಧರ್ಮರಾಜು, ರಘು, ಹುಣಸೇಮಕಿ ಲಕ್ಷ್ಮಣ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.