ಬೆಂಗಳೂರು | ಅತ್ಯಾಚಾರ ಆರೋಪ: ಬಿಜೆಪಿ ಮಾಜಿ ಮುಖಂಡನ ಮೇಲೆ ಎಫ್‍ಐಆರ್
ಬೆಂಗಳೂರು: ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಪಕ್ಷದ ಮಾಜಿ ಮುಖಂಡ ಸೋಮಶೇಖರ್ ಜಯರಾಜ್ ವಿರುದ್ಧ ಇಲ್ಲಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಆರ್ಥಿಕ ಸಹಾಯ ಮಾಡುವುದಾಗಿ ಕರೆದೊಯ್ದು ಅತ್ಯಾಚಾರ ಎಸಗಿರುವುದಾಗಿ 26 ವರ್ಷದ ಸಂತ್ರಸ್ತ ಮಹಿಳೆ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಸಂತ್ರಸ್ಥೆಗೆ ಕಳೆದ ವರ್ಷ ಮದುವೆ ನಿಗದಿಯಾಗಿದ್ದರಿಂದ 6 ಲಕ್ಷ ರೂ ಆರ್ಥಿಕ ಸಹಾಯ ಮಾಡುವಂತೆ ಸೋಮಶೇಖರ್ ಕೇಳಿಕೊಂಡಿದ್ದರು. ಅಕ್ಟೋಬರ್‍ನಲ್ಲಿ ಆಕೆಯ ಪಿಜಿ ಬಳಿ ಹೋಗಿದ್ದ ಸೋಮಶೇಖರ್, ಹಣ ಕೊಡುವುದಾಗಿ ಆಕೆಯನ್ನು ಲಾಂಗ್ ಫೋರ್ಡ್ ರಸ್ತೆಯಲ್ಲಿರುವ ತಮ್ಮ ಫ್ಲ್ಯಾಟ್‍ಗೆ ಕರೆದೊಯ್ದು ಅತ್ಯಾಚಾರ ಎಸಗಿ ಘಟನೆಯನ್ನು ಯಾರಿಗಾದರೂ ಹೇಳಿದರೆ ಪ್ರಾಣಹಾನಿ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಾಗುತ್ತಿದ್ದಂತೆ ಸೋಮಶೇಖರ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದ್ದು, ಶೋಧ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈತ 2018ರ ವಿಧಾನಸಭಾ ಚುನಾವಣೆಯಲ್ಲಿ ಸಕಲೇಶಪುರ ವಿಧಾನ ಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜೆಡಿಎಸ್‍ನ ಎಚ್.ಕೆ.ಕುಮಾರಸ್ವಾಮಿ ವಿರುದ್ಧ ಸೋಲು ಕಂಡಿದ್ದ.