ಮೂಡಿಗೆರೆ | ಅಂಬೇಡ್ಕರ್ ಪುತ್ಥಳಿ ವಿಚಾರ : ಎರಡು ತಂಡಗಳ ಘರ್ಷಣೆ

Update: 2025-01-05 17:38 GMT

ಮೂಡಿಗೆರೆ, : ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ತೆರವುಗೊಳಿಸುವ ವಿಚಾರವಾಗಿ ದಲಿತ ಸಮುದಾಯದ ಎರಡು ಗುಂಪುಗಳ ನಡುವೆ ಶನಿವಾರ ರಾತ್ರಿ ಪಟ್ಟಣದಲ್ಲಿ ಘರ್ಷಣೆ ನಡೆದಿದ್ದು, ಸಕಾಲದಲ್ಲಿ ಪೊಲೀಸರ ಮುನ್ನೆಚ್ಚರಿಕೆ ಕ್ರಮದಿಂದ ಉದ್ವಿಗ್ನ ಪರಿಸ್ಥಿತಿ ತಿಳಿಗೊಂಡಿದೆ.

ಜ.3ರಂದು ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿ ವತಿಯಿಂದ ಪಟ್ಟಣದ ಲಯನ್ಸ್ ವೃತ್ತದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು. ಆ ಸಂದರ್ಭದಲ್ಲಿ ಬೆಂಗಳೂರಿನಿಂದ ತರಿಸಲಾಗಿದ್ದ ಅಂಬೇಡ್ಕರ್ ಅವರ ಪುತ್ಥಳಿಯನ್ನು ವೇದಿಕೆ ಪಕ್ಕದಲ್ಲಿ ಪರವಾನಿಗೆ ಪಡೆಯದೇ ಪ್ರತಿಷ್ಠಾಪಿಸಲಾಗಿತ್ತು. ಶನಿವಾರ ಬೆಳಗ್ಗೆ ವೇದಿಕೆಯನ್ನು ಸಂಪೂರ್ಣವಾಗಿ ತೆರವುಗೊಳಿಸಿದ್ದರೂ ಅಂಬೇಡ್ಕರ್ ಪುತ್ಥಳಿಯನ್ನು ಮಾತ್ರ ತೆರವುಗೊಳಿಸದೇ ಹಾಗೆಯೇ ಬಿಡಲಾಗಿತ್ತು.

ಜ.10ರಂದು ಭೀಮಾ ಕೋರೆಗಾಂವ್ ವಿಜಯೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಇನ್ನೊಂದು ಭೀಮಾ ಕೋರೆಗಾಂವ್ ಆಚರಣೆ ಸಂಘದ ಸದಸ್ಯರು, ಜ.10ಕ್ಕೆ ಏರ್ಪಡಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮವನ್ನು ಇದೇ ಅಂಬೇಡ್ಕರ್ ಪುತ್ಥಳಿ ಮುಂದೆ ವೇದಿಕೆ ನಿರ್ಮಿಸಲು ಚಿಂತನೆ ನಡೆಸಿದ್ದರು. ಅಲ್ಲದೇ ಶನಿವಾರ ಸಂಜೆ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರ ಸಮ್ಮುಖದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಹಾರ ಹಾಕಿ, ನಂತರ ವಕೀಲರಿಂದ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಗಿತ್ತು.

ಜ.3ರಂದು ನಡೆಸಿದ ಭೀಮಾ ಕೋರೆಗಾಂವ್ ಸಮಿತಿ ಪದಾಧಿಕಾರಿಗಳು ಶನಿವಾರ ರಾತ್ರಿ ಸ್ಥಳಕ್ಕೆ ಆಗಮಿಸಿ, ಅಂಬೇಡ್ಕರ್ ಪುತ್ಥಳಿ ಕಾರ್ಯಕ್ರಮಕ್ಕಾಗಿ ಮಾತ್ರ ಪ್ರತಿಷ್ಠಾಪಿಸಲಾಗಿತ್ತು. ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪಿಸಲು ಈ ಹಿಂದೆಯೇ ಪಟ್ಟಣ ಪಂಚಾಯತ್ ನಿರ್ಣಯ ಕೈಗೊಂಡಿದೆ. ಆದರೆ ಜಾಗ ಗುರುತು ಮಾಡಿರಲಿಲ್ಲ. ಹಾಗಾಗಿ ಉತ್ತಮ ಸ್ಥಳದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾಡಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ. ಈಗ ತೆರವುಗೊಳಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಆಗ ಪೊಲೀಸರ ಸಮ್ಮುಖದಲ್ಲಿ ಪುತ್ಥಳಿ ತೆರವುಗೊಳಿಸಲು ಮುಂದಾದಾಗ, ಕೆಲ ದಲಿತ ಮುಖಂಡರು ಅಂಬೇಡ್ಕರ್ ಪುತ್ಥಳಿಯನ್ನು ಕಾರ್ಯಕ್ರಮಕ್ಕೆ ಮಾತ್ರ ಬಳಸಿಕೊಂಡಿದ್ದರೆ, ಕಾರ್ಯಕ್ರಮ ಮುಗಿದ ಕೂಡಲೇ ತೆರವುಗೊಳಿಸಬೇಕಿತ್ತು. ಮರು ದಿನ ಸಂಜೆವರೆಗೂ ಹಾಗೆಯೇ ಬಿಟ್ಟಿದ್ದು ಯಾಕೆ?. ಪುತ್ಥಳಿಯನ್ನು ಯಾರೂ ತೆರವುಗೊಳಿಸಬಾರದೆಂದು ಪಟ್ಟು ಹಿಡಿದರು. ಆಗ ಎರಡೂ ಗುಂಪುಗಳ ನಡುವೆ ಗಲಭೆ ಸೃಷ್ಟಿಯಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಎರಡೂ ಗುಂಪುಗಳ ಮುಖಂಡರ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆಯಿತು. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಈ ಸಂದರ್ಭದಲ್ಲಿ ಸಿಪಿಐ ಸೋಮೇಗೌಡ ಮಾತನಾಡಿ, ತಹಶೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿ, ಉತ್ತಮ ಸ್ಥಳದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಿಸಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು. ಬಳಿಕ ಅಂಬೇಡ್ಕರ್ ಪುತ್ಥಳಿ ತೆರವುಗೊಳಿಸಲು ಅನುವು ಮಾಡಿಕೊಟ್ಟರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News