ಅನರ್ಹರು ಕಾರ್ಮಿಕ ಕಾರ್ಡ್‍ಗಳನ್ನು ಸ್ವಯಂಪ್ರೇರಿತರಾಗಿ ಹಿಂದಿರುಗಿಸಬೇಕು: ಸಚಿವ ಸಂತೋಷ್ ಲಾಡ್

Update: 2025-01-04 16:50 GMT

ಕಡೂರು : ಇಲಾಖೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಕಾರ್ಮಿಕರ ಕಲ್ಯಾಣಕ್ಕೆ ರಾಜ್ಯ ಸರಕಾರ ಹಲವಾರು ಯೋಜನೆಗಳ ಮೂಲಕ ಶ್ರಮಿಸುತ್ತಿದೆ ಎಂದು ಕಾರ್ಮಿಕ ಕಲ್ಯಾಣ ಇಲಾಖೆ ಸಚಿವ ಸಂತೋಷ್ ಲಾಡ್ ಹೇಳಿದರು.

ಕಡೂರು ಪಟ್ಟಣದ ಶಾಸಕರ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಮಿಕ ಮತ್ತು ಇತರ ಕಟ್ಟಡ ನಿರ್ಮಾಣ ಮಂಡಳಿಯಲ್ಲಿ ಈಗಾಗಲೇ ವೃತ್ತಿಪರ ಕಾರ್ಮಿಕರು ತಮ್ಮ ಹೆಸರನ್ನು ನೋಂದಾಯಿಸಿದ್ದು, ಹಲವಾರು ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಆದರೆ ಕೆಲವರು ತಪ್ಪು ಮಾಹಿತಿಗಳನ್ನು ಒದಗಿಸಿ ಪಡೆದಿರುವ ಕಾರ್ಮಿಕ ಕಾರ್ಡುಗಳನ್ನು ಇಲಾಖೆಗೆ ಸ್ವಯಂ ಪ್ರೇರಿತರಾಗಿ ಹಿಂದಿರುಗಿಸುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ನೋಂದಣಿ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಗಳಿಗೆ ವಹಿಸಲಾಗುವುದೆಂದು ಹೇಳಿದರು.

ನೋಂದಣಿ ಪೂರ್ವದಲ್ಲಿ ಕಾರ್ಮಿಕ ಕಾರ್ಡ್ ಬಯಸುವವರು ಪೂರಕ ದಾಖಲೆಗಳನ್ನು ಸಲ್ಲಿಸಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಪರಿಶೀಲನೆಯನ್ನು ಅಧಿಕಾರಿಗಳು ನಡೆಸಿರಬೇಕು, ಹಾಗೆಯೇ ಸಲ್ಲಿಸಿದ ದಾಖಲೆಗಳನ್ನು ಪುರಸ್ಕರಿಸಿ ನೀಡಲಾಗಿರುವ ಕಾರ್ಡುಗಳನ್ನು ನಕಲಿ ಎಂದು ಪರಿಗಣಿಸಲಾಗುವುದು, ಈ ದೋಷಗಳು ಯಾರಿಂದ ಆಗಿವೆ ಎಂಬುದಕ್ಕಿಂತ ಮರುಪರಿಶೀಲನೆ ನಡೆಸಿ ಅರ್ಹರೆಂದು ಕಂಡು ಬಂದರೆ ಅಂಥವರ ಕಾರ್ಡುಗಳನ್ನು ಮಾನ್ಯ ಮಾಡಲಾಗುವುದು ಎಂದ ಅವರು, ಮುಂದಿನ ದಿನಗಳಲ್ಲಿ ಪ್ರತೀ ತಾಲೂಕು ಮಟ್ಟದಲ್ಲಿ ಕಾರ್ಮಿಕರ ಹೆಸರನ್ನು ಖಾಸಗಿ ಏಜೆನ್ಸಿಯವರೇ ಖುದ್ದಾಗಿ ಬಂದು ಮಾಹಿತಿ ಕಲೆ ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದರು.

ಹಾಸನ ಸಂಸದ ಶ್ರೇಯಸ್ ಪಟೇಲ್, ಶಾಸಕ ಕೆ.ಎಸ್.ಆನಂದ್, ಜಿಲ್ಲಾ ಮಟ್ಟದ ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಶಿವಾನಂದ ಸ್ವಾಮಿ, ಕಾಂಗ್ರೆಸ್ ಮುಖಂಡರಾದ ಪಂಚನಹಳ್ಳಿ ಪ್ರಸನ್ನ, ಚಂದ್ರಪ್ಪ ಹಾಗೂ ಕಾರ್ಮಿಕ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News