6 ಮಂದಿ ನಕ್ಸಲರು ಶೀಘ್ರ ಮುಖ್ಯವಾಹಿನಿಗೆ?
ಚಿಕ್ಕಮಗಳೂರು : ರಾಜ್ಯ ಮತ್ತು ಹೊರ ರಾಜ್ಯಕ್ಕೆ ಸೇರಿದ ಕೆಲವು ನಕ್ಸಲ್ ಆರೋಪಿಗಳನ್ನು ಮುಖ್ಯವಾಹಿನಿಗೆ ತರುವ ಪ್ರಕ್ರಿಯೆ ಆರಂಭವಾಗಿದ್ದು, ಮುಂಡಗಾರು ಲತಾ ಸೇರಿದಂತೆ ಆರು ಮಂದಿ ನಕ್ಸಲರು ಶೀಘ್ರ ಮುಖ್ಯವಾಹಿನಿಗೆ ಮರಳಲಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.
ಉಡುಪಿ ಜಿಲ್ಲೆ ಕಾರ್ಕಳ ಸಮೀಪದಲ್ಲಿ ನಕ್ಸಲ್ ಮುಖಂಡ ವಿಕ್ರಮ್ ಗೌಡ ಎನ್‌ಕೌಂಟರ್ ಬಳಿಕ ಭೂಗತರಾಗಿರುವ ನಕ್ಸಲ್ ಆರೋಪಿತರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವನ್ನು ಸರಕಾರ ಮಾಡಬೇಕೆಂಬ ಕೂಗು ಪ್ರಗತಿಪರ ಚಿಂತಕರು, ಸಾಹಿತಿಗಳು, ಹೋರಾಟಗಾರರಿಂದ ಕೇಳಿ ಬಂದಿತ್ತು. ಈ ಸಂಬಂಧ ಸರಕಾರಕ್ಕೆ ಮನವಿಯನ್ನೂ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸಕ್ರೀಯ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಉದ್ದೇಶದಿಂದ ನಕ್ಸಲ್ ಶರಣಾಗತಿ ಪ್ಯಾಕೇಜ್-2024 ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ನಕ್ಸಲ್ ಶರಣಾಗತಿ, ಪುನರ್ವಸತಿ ಸಮಿತಿಯು ಸಭೆಗಳನ್ನು ನಡೆಸಿ, ನಕ್ಸಲರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು ಆರು ಮಂದಿ ನಕ್ಸಲರು ಮುಖ್ಯವಾಹಿನಿಗೆ ಬರಲು ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯವರಾದ ನಕ್ಸಲ್ ನಾಯಕಿ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ಕೆ.ವಸಂತ, ಟಿ.ಎನ್.ಜೀಶ ಎಂಬ ಆರು ಮಂದಿ ನಕ್ಸಲ್ ಆರೋಪಿಗಳು ಶರಣಾಗತಿ ಪ್ಯಾಕೇಜ್‌ನಡಿಯಲ್ಲಿ ಸಮಾಜದ ಮುಖ್ಯವಾಹಿನಿಗೆ ಬರುವುದು ಬಹುತೇಕ ಖಚಿತವಾಗಿದೆ ಎಂದು ತಿಳಿದು ಬಂದಿದೆ. ನಕ್ಸಲ್ ಶರಣಾಗತಿ ಸಮಿತಿ, ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ಈ ಸಂಬಂಧ ಹಲವು ಸಭೆಗಳನ್ನು ನಡೆಸಿದ್ದು, ಶೀಘ್ರ 6 ಮಂದಿ ನಕ್ಸಲರು ಮುಖ್ಯವಾಹಿನಿಗೆ ಮರಳುವ ಪ್ರಕ್ರಿಯೆ ಅಂತಿಮಗೊಳ್ಳಲಿದೆ ಎನ್ನಲಾಗುತ್ತಿದೆ.
ನಕ್ಸಲರು ಸರಕಾರದ ಮುಂದೆ ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎಂದೂ ತಿಳಿದು ಬಂದಿದ್ದು, ಸರಕಾರ ಶರಣಾಗತರಾಗುವ ನಕ್ಸಲರಿಗೆ ಪರಿಹಾರ, ಪುನರ್ವಸತಿ ಸೇರಿದಂತೆ ನಕ್ಸಲರ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಗೆ ಸೂಚಿಸಿದೆ ಎಂದೂ ತಿಳಿದು ಬಂದಿದೆ.
ಮುಖ್ಯವಾಹಿನಿಗೆ ಬರುವ ಪ್ರಕ್ರಿಯೆಗಳು ಘನತೆಯುತವಾಗಿ ನಡೆಯಬೇಕು. ಅವರ ಆತ್ಮಗೌರವಕ್ಕೆ ಧಕ್ಕೆಯಾಗಬಾರದು. ಹೋರಾಟದ ಮಾರ್ಗ ಬದಲಿಸಿ ಪ್ರಜಾತಾಂತ್ರಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ತಡೆಯಾಗಬಾರದು, ಮುಖ್ಯವಾಹಿನಿಗೆ ಬಂದ ಬಳಿಕ ಜೈಲಿನಲ್ಲಿ ಕೊಳೆಯುವ ಸ್ಥಿತಿ ಇರಬಾರದು. ಸಂಬಂಧ ಇಲ್ಲದಿದ್ದರೂ ಹಲವು ಪ್ರಕರಣಗಳಲ್ಲಿ ಅವರ ಹೆಸರು ಸೇರ್ಪಡೆಯಾಗಿದ್ದು, ಅವುಗಳಿಂದ ಮುಕ್ತಿ ಸಿಗಬೇಕು. ಮುಖ್ಯವಾಹಿನಿಗೆ ಬಂದ ಬಳಿಕ ಬೇಗನೆ ಜಾಮೀನಿನ ಮೇಲೆ ಹೊರ ಬರುವಂತಾಗಲು ಸರಕಾರ, ಪೊಲೀಸ್ ಇಲಾಖೆ ಸಹಕರಿಸಬೇಕು ಎಂಬ ನಕ್ಸಲರ ಮನವಿಗೆ ಸರಕಾರ ಒಪ್ಪಿಗೆ ಸೂಚಿಸಿದ್ದು, ಕಾನೂನು ಸೇವಾ ಪ್ರಾಧಿಕಾರದಿಂದ ನೆರವು ಕೊಡಿಸುವ ಭರವಸೆಯನ್ನೂ ಸರಕಾರ ನೀಡಿದೆ ಎಂದು ತಿಳಿದು ಬಂದಿದೆ.
ಎಲ್ಲಾ ಮೊಕದ್ದಮೆಗಳನ್ನು ವಿಶೇಷ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಲು ಸಹಕಾರ ನೀಡುವುದು, ಪ್ರವರ್ಗ ಎ ವರ್ಗಕ್ಕೆ ಸೇರಿದವರಿಗೆ 7.50 ಲಕ್ಷ, ಪ್ರವರ್ಗ ಬಿ ವರ್ಗಕ್ಕೆ 4 ಲಕ್ಷ ರೂ. ಆರ್ಥಿಕ ನೆರವನ್ನು ಮೂರು ಹಂತಗಳಲ್ಲಿ ನೀಡುವುದು, ಕೌಶಲ ತರಬೇತಿ ನೀಡುವುದು, ಕೇರಳ, ಕರ್ನಾಟಕ, ತಮಿಳುನಾಡು ಸೇರಿ ಎಲ್ಲಾ ಸರಕಾರಗಳೂ ನಕ್ಸಲರ ಬಗ್ಗೆ ಅನುಕಂಪದಿಂದಲೇ ವರ್ತಿಸುವಂತೆ ನೋಡಿಕೊಳ್ಳಲಾಗುವುದು ಎಂಬ ಭರವಸೆಯನ್ನು ಸರಕಾರ ನೀಡಿದೆ ಎಂದು ತಿಳಿದು ಬಂದಿದೆ.
ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಸಭೆಯ ಪ್ರತಿನಿಧಿಗಳಾಗಿ ಶರಣಾಗತಿ ಸಮಿತಿ ಸದಸ್ಯ ಶ್ರೀಪಾಲ್ ಕೆ. ಪಿ., ಪಾರ್ವತೀಶ, ಶಾಂತಿಗಾಗಿ ನಾಗರಿಕರ ವೇದಿಕೆಯ ಸದಸ್ಯ ನೂರ್ ಶ್ರೀಧರ್, ವಿ.ಎಸ್.ಶ್ರೀಧರ್, ನಗರಗೆರೆ ರಮೇಶ್, ಎನ್. ವೆಂಕಟೇಶ್, ತಾರಾರಾವ್, ಕೆ.ಎಲ್.ಅಶೋಕ್ ಉಪಸ್ಥಿತರಿದ್ದರು.
2024 ನ.12ರಂದು ಜಿಲ್ಲೆಯ ಕೊಪ್ಪ ತಾಲೂಕು ಜಯಪುರ ಸಮೀಪದ ಕಡೇಗುಂದಿ ಗ್ರಾಮದ ಸುಬ್ಬಗೌಡ ಎಂಬವರ ಒಂಟಿ ಮನೆಗೆ ಮುಂಡಗಾರು ಲತಾ, ಜಯಣ್ಣ ಹಾಗೂ ಇತರರು ಇದ್ದ ನಕ್ಸಲರ ತಂಡ ಭೇಟಿ ನೀಡಿ ಪರಾರಿಯಾಗಿದ್ದರು. ಈ ಘಟನೆ ಬಳಿಕ ನಕ್ಸಲರ ತಂಡವನ್ನು ಎಎನ್‌ಎಫ್ ತಂಡ ಬೆನ್ನು ಬಿದ್ದಿತ್ತು. ನಂತರ ಕೆಲವೇ ದಿನಗಳಲ್ಲಿ ಉಡುಪಿ ಜಿಲ್ಲೆ ಕಾರ್ಕಳ ಸಮೀಪದಲ್ಲಿ ನಕ್ಸಲ್ ಮುಖಂಡ ಉಡುಪಿ ಮೂಲದವರಾದ ವಿಕ್ರಮ್‌ಗೌಡ ಎಂಬವರು ಎಎನ್‌ಎಫ್ ಸಿಬ್ಬಂದಿ ಹಾಗೂ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದರು. ಈ ಎನ್‌ಕೌಂಟರ್ ಅನುಮಾನಗಳು ವ್ಯಕ್ತವಾಗಿದ್ದವು. ನಕಲಿ ಎನ್‌ಕೌಂಟರ್ ಅರೋಪ ತೀವ್ರ ಚರ್ಚೆಗೂ ಗ್ರಾಸವಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ನಂತರ ರಾಜ್ಯ ಸರಕಾರ ನಕ್ಸಲ್ ಶರಣಾಗತಿ ಪ್ಯಾಕೇಜ್-2024ಅನ್ನು ಘೋಷಣೆ ಮಾಡಿತ್ತು.
ನಕ್ಸಲರ ಸರಕಾರದ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳು:
ಕುಟುಂಬಗಳಿಗೆ ಐದು ಎಕರೆ ಕೃಷಿ ಭೂಮಿ ನೀಡಬೇಕು, ಶಾಶ್ವತ ಹಕ್ಕುಪತ್ರ ನೀಡಬೇಕು. ಎಲ್ಲಾ ಆದಿವಾಸಿ ಕುಟುಂಬಗಳಿಗೆ ಭೂಮಿ ಮತ್ತು ವಸತಿ ನೀಡಬೇಕು. ಕೃಷಿ ಯೋಗ್ಯ ಪಾಳುಭೂಮಿಯನ್ನು ಭೂಹೀನರಿಗೆ ಹಂಚಬೇಕು. ಆದಿವಾಸಿಗಳಿಗೆ ಕಾಡಿನ ಮೇಲಿನ ಎಲ್ಲ ರೀತಿಯ ಅಧಿಕಾರ ನೀಡಬೇಕು, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ರದ್ದಾಬೇಕು. ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ರೈತರನ್ನು ಒಕ್ಕಲೆಬ್ಬಿಸುವುದನ್ನು ನಿಲ್ಲಿಸಬೇಕು. ರೈತರ ಒತ್ತುವರಿ ಭೂಮಿ ತೆರವುಗೊಳಿಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂಬಂತಹ ಬೇಡಿಕೆಗಳನ್ನು ನಕ್ಸಲರು ಸರಕಾರದ ಮುಂದಿಟ್ಟಿದ್ದಾರೆ.