ಚಿಕ್ಕಮಗಳೂರು: ಮೈಲಾರಲಿಂಗ ಸ್ವಾಮಿ ಹೆಸರಲ್ಲಿ ಜನರಿಗೆ ಮೋಸ; ಆರೋಪ

Update: 2025-01-06 04:58 GMT

ಚಿಕ್ಕಮಗಳೂರು: ಮೈಲಾರಲಿಂಗ ಸ್ವಾಮಿ ಹೆಸರಲ್ಲಿ ತಂಡವೊಂದು ಗ್ರಾಮೀಣ ಭಾಗದಲ್ಲಿ ಮನೆಮನೆಗಳಿಗೆ ತೆರಳಿ ಜನರಿಗೆ ಮೋಸ ಮಾಡುತ್ತಿರುವ ಪ್ರಕರಣ ನಡೆಯುತ್ತಿರುವ ಬಗ್ಗೆ ವರದಿಯಾಗಿದೆ.

ಮೈಲಾರಲಿಂಗ ಒಕ್ಕಲಿನ ಬಟ್ಟೆ ಧರಿಸಿ ಮನೆಗಳಿಗೆ ನುಗ್ಗುತ್ತಿರುವ ನಾಲ್ವರು, ಮನೆಯವರು ಬಾಗಿಲು ತೆಗೆಯುವ ವರೆಗೂ ಹೋಗಲ್ಲ. ಮನೆ ಹಿಂದೆ-ಮುಂದೆ ಎಲ್ಲಾ ಸುತ್ತಾಡುತ್ತಾರೆ, ಗೌಡ್ರೆ, ಅಮ್ಮ, ಅಮ್ಮಾವ್ರೆ, ಅವ್ವ, ಸರ್, ಮಾಲೀಕರೇ, ಅಪ್ಪಾಜಿ ಅಂತೆಲ್ಲಾ ಬರೋವರ್ಗೂ ಕೂಗ್ತಾರೆ. ಜನರನ್ನು ಕಂಡ ಕೂಡಲೇ ತಲೆಗೆ ಬಟ್ಟೆ ಹಾಕಿ, ನಿಮ್ಮ ಮನೆಗೆ ಮೈಲಾರಲಿಂಗ ಬಂದಾನಾ ಎನ್ನುತ್ತಾ, ಮನೆಯವರು ಬಾಗಿಲು ತೆಗೆದ ಕೂಡಲೇ ಸೀದಾ ಒಳಗೆ ಹೋಗ್ತಿರೋ ಇವರು ಮಹಿಳೆಯರಿಗೆ ದೇವರು, ದಿಂಡಿರು ಅಂತ ಹೆದರಿಸಿ ಹಣ ಪಡೆಯುತ್ತಿದ್ದಾರೆ. ಒಂಟಿ ಮನೆಗಳು ಹಾಗೂ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಓಡಾಟ ನಡೆಸುವ ಈ ತಂಡ ಮನೆಯವರಿಗೆ ಇಲ್ಲಸಲ್ಲದ ಭಯ ಹುಟ್ಟಿಸಿ ಆ ಪೂಜೆ ಮಾಡಬೇಕು, ಈ ಪೂಜೆ ಮಾಡಬೇಕು ಎಂದೆಲ್ಲ ಹಣವನ್ನು ಪೀಕಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಜನವರಿ 3ರಂದು ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಸಮೀಪದ ಬಾಳೆಹಳ್ಳಿ ರಮೇಶ್ ಗೌಡ ಮತ್ತು ಬಿದರಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್. ನಾಗರಾಜು ಅವರ ಮನೆಗೆ ಬಂದಿದ್ದ ನಾಲ್ವರು ಮನೆಯಲ್ಲಿದ್ದ ಮಹಿಳೆಯರಿಗೆ ನಿಮ್ಮ ಯಜಮಾನನಿಗೆ ಕಂಟಕವಿದೆ. ಅಷ್ಟು ದಿನದಲ್ಲಿ ಹಾಗಾಗುತ್ತೆ, ಹೀಗಾಗುತ್ತೇ, ಕಂಟಕ ಪರಿಹಾರಕ್ಕೆ ಪೂಜೆ ಮಾಡಿಸಬೇಕು. ಅದಕ್ಕೆ ಹತ್ತು ಸಾವಿರ, ಇಪ್ಪತ್ತು ಸಾವಿರ ಆಗುತ್ತೆ. ಅಷ್ಟು ಕೊಟ್ಟರೆ ದೋಷ ಪರಿಹಾರ ಮಾಡಿಕೊಡುತ್ತೇವೆ ಎಂದೆಲ್ಲಾ ಹೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿದರಹಳ್ಳಿಯ ಕೃಷಿಕರೊಬ್ಬರ ಮನೆಯಲ್ಲಿ ನೂರು ರೂಪಾಯಿ ಕೊಟ್ಟಾಗ ಅದನ್ನು ಅಲ್ಲಿಯೇ ಬಿಸಾಕಿ ಹೋದ ಈ ತಂಡ, ಬಾಳೆಹಳ್ಳಿ ರಮೇಶ್ ಗೌಡ ಎಂಬವರ ಮನೆಗೆ ಹೋಗಿ ಅಂಗಳದಲ್ಲಿದ್ದ ಕೆಲಸದವರ ಬಳಿ ಈ ಮನೆಯಲ್ಲಿ ಎಷ್ಟು ಜನ ಇದ್ದಾರೆ ಎಂದೆಲ್ಲಾ ವಿಚಾರಿಸಿದ್ದಾರೆ. ಬಾಳೆಹಳ್ಳಿ ನಾಗರಾಜು ಅವರ ಮನೆಯಲ್ಲಿ ನಾಗರಾಜು ಅವರ ಪತ್ನಿಯೊಂದಿಗೆ, ನಿಮ್ಮ ಯಜಮಾನರಿಗೆ ಕಂಟಕವಿದೆ ಎಂದು ಹೆದರಿಸಿ ದೋಷ ಪರಿಹಾರಕ್ಕೆ 11 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಸಮಯದಲ್ಲಿ ಅವರ ಮಗ ಬಂದು ಹೆದರಿಸಿದ ತಕ್ಷಣ ಮನೆಯಿಂದ ಕಾಲ್ಕಿತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮನೆಗಳಿಗೆ ಈ ಗುಂಪು ಬರುವುದು, ಹೋಗುವುದು, ಮನೆ ಬಾಗಿಲು ತೆಗೆದ ತಕ್ಷಣ ಏಕಾಏಕಿ ಮನೆಯೊಳಗೆ ನುಗ್ಗುವುದು ಈ ದೃಶ್ಯಗಳೆಲ್ಲ ಮನೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಂತಹ ತಂಡ ಮಲೆನಾಡಿನ ಎಲ್ಲಾ ಕಡೆ ಓಡಾಡುತ್ತಿದ್ದು, ಇವರಿಂದ ಮುಂದೆ ಭಾರೀ ಮೋಸ, ಅನಾಹುತ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಮೈಲಾರಲಿಂಗನ ವೇಷದಲ್ಲಿ ಬಂದು ಮನೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಮುಂದೆ ಬೇರೆ ರೀತಿಯ ಕೃತ್ಯಗಳಿಗೆ ಕಾರಣವಾಗಬಹುದು ಎಂದು ಸ್ಥಳೀಯರು ಇಂತಹವರ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಇಂಥವರು ಎಲ್ಲೇ ಕಂಡರೂ ಕೂಡಲೇ ಪೊಲೀಸರಿಗೆ ತಿಳಿಸುವಂತೆ  ಹಾಗೂ ಪೊಲೀಸರು ಇಂತಹ ವೇಷಧಾರಿಗಳನ್ನು ವಿಚಾರಣೆಗೆ ಒಳಪಡಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.




 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News