ಮೂಡಿಗೆರೆ | ಕಾಫಿ ಕೊಯ್ಲು ಮಾಡುತ್ತಿದ್ದಾಗ ಕಾಡುಕೋಣ ದಾಳಿ; ಕಾರ್ಮಿಕ ಮಹಿಳೆ ಮೃತ್ಯು
ಮೂಡಿಗೆರೆ : ಕಾಫಿ ಕೊಯ್ಲು ಮಾಡುತ್ತಿದ್ದಾಗ ಕಾಡುಕೋಣ ದಾಳಿ ನಡೆಸಿದ ಪರಿಣಾಮ ಕಾರ್ಮಿಕ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಹಳೇಕೋಟೆ ಗ್ರಾಮದಲ್ಲಿ ಬುಧವಾರ ಬೆಳೆಗ್ಗೆ ನಡೆದಿದೆ.
ಹಳೇಕೋಟೆ ಗ್ರಾಮದ ಕಾಫಿ ಎಸ್ಟೇಟ್‌ವೊಂದರಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತರನ್ನು ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಬಸೂರಿ ಬೀಬಿ (42) ಎಂದು ಗುರುತಿಸಲಾಗಿದೆ.
ಇಂದು ಬೆಳಿಗ್ಗೆ ಅಸ್ಸಾಂ ಮೂಲದ ಕಾರ್ಮಿಕರು ರಮೇಶ್ ಎಂಬವರ ತೋಟದಲ್ಲಿ ಕಾಫಿ ಕೊಯ್ಲು ಮಾಡುವುದರಲ್ಲಿ ನಿರತರಾಗಿದ್ದರು. ಸುಮಾರು 11 ಗಂಟೆ ಸಮಯದಲ್ಲಿ ಏಕಾಏಕಿ ಕಾಡುಕೋಣವೊಂದು ಕಾರ್ಮಿಕರ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ಅಸ್ಸಾಂ ಮೂಲದ ಮಹಿಳಾ ಕಾರ್ಮಿಕರೊಬ್ಬರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಕಾಡುಕೋಣ ಮಹಿಳೆಯ ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಕೊಂಬಿನಿಂದ ತಿವಿದಿದ್ದು, ತೀವ್ರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ಕೊಂಡೊಯ್ದಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಮಲೆನಾಡು ಭಾಗದಲ್ಲಿ ಕಾಡುಕೋಣಗಳು ವಿಪರೀತ ಸಂಖ್ಯೆಯಲ್ಲಿದ್ದು, ನಿರಂತರವಾಗಿ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿವೆ. ಕಾಫಿ ತೋಟಗಳಲ್ಲಿ ಗಿಡಗಳನ್ನು ಕಿತ್ತು ಹಾಕುವುದಲ್ಲದೇ, ಜೀವ ಹಾನಿಗೂ ಕಾರಣವಾಗುತ್ತಿವೆ. ಕಾಡುಕೋಣಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿದ್ದಾರೆ.