ಚಿಕ್ಕಮಗಳೂರು: ಶವ ಹೂಳುವ ಜಾಗದ ವಿಚಾರಕ್ಕೆ ದಲಿತರು, ಒಕ್ಕಲಿಗರ ನಡುವೆ ವಾಗ್ವಾದ
ಚಿಕ್ಕಮಗಳೂರು: ಮೃತ ವ್ಯಕ್ತಿಯೊಬ್ಬರ ಶವ ಹೂಳುವ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ದಲಿತರು ಮತ್ತು ಒಕ್ಕಲಿಗರ ನಡುವೆ ನಡೆದ ಗಲಾಟೆ ಉದ್ವಿಗ್ನ ಹಂತಕ್ಕೆ ತಲುಪಿರುವ ಘಟನೆ ತಾಲೂಕಿನ ಆಲ್ದೂರು ಪಟ್ಟಣ ಸಮೀಪದಲ್ಲಿ ಶುಕ್ರವಾರ ನಡೆದಿದೆ.
ತಾಲೂಕಿನ ಆಲ್ದೂರು ಗ್ರಾಪಂ ವ್ಯಾಪ್ತಿಯ ಆಲ್ದೂರು ಪಟ್ಟಣ ಸಮೀಪದಲ್ಲಿರುವ ಬಿರಂಜಿ ಹಳ್ಳದ ಸಮೀಪದಲ್ಲಿ ದಲಿತರ ಸ್ಮಶಾನಕ್ಕೆ ಜಾಗ ಮಂಜೂರಾಗಿದ್ದು, ಪಹಣಿಯಲ್ಲಿ ಸ್ಮಶಾನ ಜಾಗ ಎಂದು ದಾಖಲಾಗಿದೆ ಎಂದು ಶುಕ್ರವಾರ ಮೃತ ವ್ಯಕ್ತಿಯೊಬ್ಬರ ಶವ ಹೂಳಲು ದಲಿತ ಸಮುದಾಯದವರು ಮುಂದಾಗಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಒಕ್ಕಲಿಗ ಸಮುದಾಯದ ಕೆಲ ಮುಖಂಡರು, ಮಹಿಳೆಯರು, ಜಾಗ ಒಕ್ಕಲಿಗ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಗ್ರಾಮ ಪಂಚಾಯತ್ ಕಾಯ್ದಿರಿಸಿದ ಜಾಗವಾಗಿದೆ. ಈ ಸಂಬಂಧ ಗ್ರಾಮ ಪಂಚಾಯತ್‍ನಲ್ಲಿ ನಿರ್ಣಯಕೈಗೊಳ್ಳಲಾಗಿದೆ ಎಂದು ಶವ ಹೂಳಲು ಅಡ್ಡಿ ಪಡಿಸಿದ್ದಾರೆ ಎನ್ನಲಾಗಿದೆ.
ಇದನ್ನು ಅಲ್ಲಗೆಳೆದ ದಲಿತರು ಸ್ಮಶಾನಕ್ಕೆ ಮಂಜೂರಾದ ಜಾಗ ಎನ್ನಲಾದ ಜಾಗದಲ್ಲಿ ಗುಂಡಿ ತೆಗೆದು ಶವ ಹೂಳಲು ಸಿದ್ಧತೆ ನಡೆಸಿದ್ದಾರೆ. ಈ ವೇಳೆ ಕೆಲ ಒಕ್ಕಲಿಗ ಸಮುದಾಯದ ಮಹಿಳೆಯರು ಶವದ ಗುಂಡಿಗಿಳಿದು ಶವ ಹೂಳಲು ಅಡ್ಡಿ ಪಡಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು. ಒಕ್ಕಲಿಗರು ಮತ್ತು ದಲಿತರ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆದಿದೆ. ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು. ಈ ವೇಳೆ ಸ್ಥಳಕ್ಕೆ ಚಿಕ್ಕಮಗಳೂರು ತಹಶೀಲ್ದಾರ್ ಡಾ.ಸುಮಂತ್ ಆಗಮಿಸಿದ್ದು, ವಿವಾದಿತ ಜಾಗದ ಬಗ್ಗೆ ಪರಿಶೀಲನೆ ನಡೆಸಲಾಗುವುದು, ಅಲ್ಲಿಯವರೆಗೆ ಶವ ಹೂಳದಂತೆ ಮನವಿ ಮಾಡಿದ್ದಾರೆ.
ಇದರಿಂದ ಆಕ್ರೋಶಗೊಂಡ ದಲಿತರು, ಆಲ್ದೂರು ಪಟ್ಟಣ ಸಮೀಪದಲ್ಲಿ ದಲಿತರಿಗೆ ಸ್ಮಶಾನ ಜಾಗ ಇಲ್ಲ. ಮನವಿ ಮೇರೆಗೆ ಸ್ಮಶಾನ ಜಾಗ ಮಂಜೂರಾಗಿದೆ. ಪಹಣಿಯಲ್ಲಿ ದಲಿತರಿಗೆ ಮಂಜೂರಾದ ಸ್ಮಶಾನ ಜಾಗ ಎಂದು ನಮೂದಾಗಿದೆ. ಗ್ರಾಪಂ ಅಧಿಕಾರಿಗಳು ಮತ್ತು ಕೆಲ ಜನಪ್ರತಿನಿಧಿಗಳು ಸೇರಿ ಈ ಜಾಗವನ್ನು ಪ್ರಭಾವಿ ಸಮುದಾಯದವರಿಗೆ ಮಂಜೂರು ಮಾಡಲು ಹುನ್ನಾರ ನಡೆಸಿದ್ದಾರೆ. ದಲಿತರು ಸತ್ತರೇ ಹೆಣ ಹೂಣಲು ಜಾಗ ಇಲ್ಲದಂತಾಗಿದೆ. ಈ ಜಾಗದ ಬಗ್ಗೆ ಹಿಂದಿನಿಂದ ವಿವಾದ ಇದ್ದಿದ್ದರಿಂದ ಸರ್ವೆ ಮಾಡಿ ಸಮಸ್ಯೆ ಪರಿಹರಿಸಬೇಕೆಂದು ತಹಶೀಲ್ದಾರ್, ಡಿಸಿ ಸೇರಿದಂತೆ ಸಂಬಂಧಿಸಿದವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಮ್ಮ ಮನವಿಗೆ ಯಾರೂ ಸ್ಪಂದಿಸದ ಕಾರಣಕ್ಕೆ ನಮಗೆ ಮಂಜೂರಾದ ಜಾಗದಲ್ಲಿ ಶವ ಹೂಳುತ್ತಿದ್ದೇವೆ ಎಂದು ಪಟ್ಟು ಹಿಡಿದ ದಲಿತರು, ಅದೇ ಜಾಗದಲ್ಲಿ ಶವ ಸಂಸ್ಕಾರ ನೆರವೇರಿಸಿದ್ದಾರೆ. ಈ ವೇಳೆ ಮತ್ತೆ ಪರಿಸ್ಥಿತಿ ಕೈಮೀರುವ ಸಂದರ್ಭ ಉಂಟಾಗಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಸದ್ಯ ಜಾಗದ ವಿಚಾರವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಾಗ ತಮ್ಮದೆಂದು ಒಕ್ಕಲಿಗರು ವಾದಿಸುತ್ತಿದ್ದರೆ, ದಲಿತರ ಸ್ಮಶಾನಕ್ಕೆ ಮಂಜೂರಾದ ಜಾಗ ಎಂದು ಸ್ಥಳೀಯ ದಲಿತರು ವಾದಿಸುತ್ತಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದು, ವಿವಾದ ಯಾವ ಹಂತಕ್ಕೆ ತಿರುಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದದಲ್ಲಿ ಕಠಿಣ ಕ್ರಮ: ಎಸ್ಪಿ
ಸ್ಮಶಾನದ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ವ್ಯವಸ್ಥೆಗೆ ಧಕ್ಕೆ ತಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ರಕ್ಷಣಾಧಿಕಾರಿ ವಿಕ್ರಂ ಆಮ್ಟೆ ಎಚ್ಚರಿಕೆ ನೀಡಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಆಲ್ದೂರು ಸರ್ವೆ ನಂಬರ್ 108 ರಲ್ಲಿ ದಲಿತ ಮಹಿಳೆಯ ಅಂತ್ಯಸಂಸ್ಕಾರ ನಡೆಸಲು ಕೆಲವರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಪಹಣಿ ದಾಖಲೆ ಪ್ರಕಾರ ಸ್ಮಶಾನ ಎಂದು ಇದ್ದರೂ 2013ರಿಂದ ವಿವಾದ ಸೃಷ್ಟಿಯಾಗಿದೆ. 2013 ರ ನಂತರ ಗ್ರಾಮ ಪಂಚಾಯಿತಿಯಲ್ಲಿ ಒಂದು ಸಮುದಾಯದ (ಒಕ್ಕಲಿಗ) ಪರವಾಗಿ ನಿರ್ಣಯ ಮಾಡಲಾಗಿದ್ದು, ಜಾಗಕ್ಕೆ ಸಂಬಂಧಿಸಿದಂತೆ ತಡೆ ಆದೇಶ, ಇಂಜೆಕ್ಷನ್ ಇಲ್ಲ ಎಂದು ತಿಳಿಸಿದರು.
ದಲಿತ ಸಮುದಾಯದ ಮಹಿಳೆಯ ಅಂತ್ಯಕ್ರಿಯೆ ನಡೆಸಲು ಬಂದಾಗ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ವಾಗ್ವಾದ ಗಲಾಟೆಯೂ ನಡೆದಿದ್ದು, ಪೊಲೀಸರು, ತಹಸೀಲ್ದಾರ್, ಪಂಚಾಯತ್ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯ ನಡೆಸಲಾಗಿದೆ. ವಿವಾದಕ್ಕೆ ಸಂಬಂಧಿಸಿದಂತೆ ದೂರು- ಪ್ರತಿ ದೂರು ನೀಡಿದ್ದು, ಉಭಯ ಬಣಗಳ ಮುಖ್ಯಸ್ಥರನ್ನು ಕರೆದು ಚರ್ಚಿಸಿ ಶಾಂತಿ ಕಾಯ್ದುಕೊಳ್ಳಲು ತಿಳಿಸಲಾಗಿದೆ. ಮತ್ತೆ ಸಭೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ಸಮಸ್ಯೆ ಬಗೆಹರಿಸಿ ಗೊಂದಲಕ್ಕೆ ತೆರೆ ಎಳೆಯುವುದಾಗಿ ಹೇಳಿದರು.