ಚಿಕ್ಕಮಗಳೂರು | ಬಾಬಾ ಬುಡನ್ ಶಾ ವಂಶಸ್ಥರ ಗೋರಿಗಳಿಗೆ ಕುಂಕುಮ, ಅರಿಶಿನ ಲೇಪನ ಆರೋಪ : ಕ್ರಮಕ್ಕೆ ಪೊಲೀಸರಿಗೆ ದೂರು

Update: 2024-09-03 17:42 GMT

ಚಿಕ್ಕಮಗಳೂರು: ಬಾಬಾ ಬುಡಾನ್ ದರ್ಗಾ ಸಮೀಪದಲ್ಲಿರುವ ಸೈಯದ್ ಬಾಬಾ ಬುಡನ್ ಶಾ ವಂಶಸ್ಥರ ಗೋರಿಗಳು ಹಾಗೂ ಪಕ್ಕದಲ್ಲಿರುವ ಅತ್ತಿಮರದ ಬಳಿ ಅಪರಿಚಿತರು ತೆಂಗಿನ ಕಾಯಿ ಒಡೆದು, ಅರಿಶಿನ, ಕುಂಕುಮ ಲೇಪಿಸುವ ಮೂಲಕ ಒಂದು ಸಮುದಾಯದವರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಇಂತಹವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೈಯದ್ ಬುಡೆನ್ ಶಾ ವಂಶಸ್ಥರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸೈಯದ್ ಫಕ್ರುದ್ದೀನ್ ಶಾ ಆಗ್ರಹಿಸಿದ್ದಾರೆ.

ಸೋಮವಾರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿರುವ ಅವರು, ಆ.18ರಂದು ಹುಣ್ಣಿಮೆಯ ದಿನದಂದು ಕೆಲ ಅಪರಿಚಿತರು ಬಾಬಾ ಬುಡಾನ್ ದರ್ಗಾದ ಆವರಣದಲ್ಲಿರುವ ನಮ್ಮ ವಂಶಸ್ಥರ ಗೋರಿಗಳು ಹಾಗೂ ಗೋರಿಗಳ ಪಕ್ಕದಲ್ಲೇ ಇರುವ ಅತ್ತಿಮರದ ಬಳಿ ಅಕ್ರಮವಾಗಿ ಪ್ರವೇಶಿಸಿ ಇತರ ಧರ್ಮದ ಆಚರಣೆ ನಡೆಸಿದ್ದಾರೆ. ಈ ಸಂಬಂಧ ಸ್ಥಳೀಯರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ನಾನು ಇತರ ಸದಸ್ಯರೊಂದಿಗೆ ಸ್ಥಳಕೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಗೋರಿಗಳ ಸಮೀಪದಲ್ಲಿ ತೆಂಗಿನಕಾಯಿ ಹಾಗೂ ಗೋರಿಗಳಿಗೆ ಅರಿಶಿನ, ಕುಂಕುಮ ಸಿಂಪಡಿಸಿರುವುದು ಪತ್ತೆಯಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ನಮ್ಮ ಪೂರ್ವಜರ ಗೋರಿಗಳು ಇರುವ ಜಾಗದಲ್ಲಿ ಇತರ ಧರ್ಮದ ಆಚರಣೆ ನಡೆಸುವ ಮೂಲಕ ನಮ್ಮ ಸಮುದಾಯದವರ ಭಾವನೆಗಳಿಗೆ ನೋವುಂಟು ಮಾಡಲಾಗಿದೆ. ಈ ಮೂಲಕ ಕೋಮು ಪ್ರಚೋದನೆಯ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

"ಘಟನೆ ಸಂಬಂಧ ಸೋಮವಾರ ರಾತ್ರಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದು, ಈ ವೇಳೆ ಠಾಣಾಧಿಕಾರಿ ದೂರು ಪಡೆಯದೆ ಉಡಾಫೆ ವರ್ತನೆ ತೋರಿದ್ದಾರೆ. ಈ ವರ್ತನೆಯಿಂದ ಬೇಸರವಾಗಿದ್ದು, ಪೊಲೀಸರು ಸಾಮಾನ್ಯ ಬಡಜನರಿಗೆ ಹೇಗೆ ನ್ಯಾಯ ನೀಡಬಲ್ಲರು ಎಂಬ ಅನುಮಾನಕ್ಕೂ ಎಡೆ ಮಾಡಿಕೊಟ್ಟಿದೆ. ಆದ್ದರಿಂದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸಬೇಕು"

ಸೈದ್ ಫಕ್ರುದ್ದೀನ್ ಶಾ ಖಾದ್ರಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News