ಅಮಿತ್ ಶಾ, ಸಿ.ಟಿ.ರವಿ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ; ರಾಜೀನಾಮೆಗೆ ಆಗ್ರಹ

Update: 2024-12-20 17:52 GMT

ಚಿಕ್ಕಮಗಳೂರು : ಕೇಂದ್ರ ಗೃಹಸಚಿವ ಅಮಿತ್ ಶಾ ಹಾಗೂ ಶಾಸಕ ಸಿ.ಟಿ.ರವಿ ಹೇಳಿಕೆ ಖಂಡಿಸಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಶುಕ್ರವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಮತ್ತು ಮುಖಂಡರು ಅಮಿತ್ ಶಾ ಹಾಗೂ ಸಿ.ಟಿ.ರವಿ ಭಿತ್ತಿಪತ್ರ ಪ್ರದರ್ಶಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ರಮಾನಾಥ ರೈ ಧರಣಿ ನಿರತರನ್ನುದ್ದೇಶಿಸಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿರುವ ಅಮಿತ್ ಶಾ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಆಕ್ಷೇಪಾರ್ಹ ಪದದಿಂದ ನಿಂಧಿಸಿರುವ ಸಿ.ಟಿ.ರವಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮನುವಾದವನ್ನು ಮೈಗೂಡಿಸಿಕೊಂಡಿರುವ ಆರೆಸ್ಸೆಸ್‌ ಹಾಗೂ ಬಿಜೆಪಿ ಎಂದೂ ಸಂವಿಧಾನವನ್ನು ಒಪ್ಪಿಕೊಂಡಿಲ್ಲ. ತಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು ಎಂದು ಅನೇಕ ಬಾರಿ ಹೇಳಿದ್ದಾರೆ. ಅದರ ಮುಂದುವರಿದ ಭಾಗವಾಗಿ ಅಮಿತ್ ಶಾ ಅವರ ಬಾಯಲ್ಲಿ ಇಂತಹ ಮಾತುಗಳು ಬಂದಿವೆ ಎಂದು ಟೀಕಿಸಿದ ಅವರು, ದುರ್ಬಲ ವರ್ಗದವರ ಪರವಾಗಿ ಎಂದೂ ಬಿಜೆಪಿಯವರು ನಿಂತಿಲ್ಲ. ಸದನಕ್ಕೆ ಬರುವಾಗ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಬರುತ್ತಾರೆ. ಅಂತಹ ಸಂವಿಧಾನ ಹಾಗೂ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವುದು ಖಂಡನೀಯ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಕೇಂದ್ರ ಸಚಿವ ಅಮಿತ್ ಶಾ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ ಮೂಲಕ ಇಡೀ ದೇಶಕ್ಕೆ ಅಪಮಾನ ಮಾಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಹಿಳೆಗೆ ಕೆಟ್ಟ ಪದ ಬಳಕೆ ಮೂಲಕ ಚಿಕ್ಕಮಗಳೂರು ಜಿಲ್ಲೆ ಹಾಗೂ ರಾಜ್ಯದ ಜನತೆ ತಲೆತಗ್ಗಿಸುವಂತಹ ಕೆಲಸ ಮಾಡಿದ್ದಾರೆ ಎಂದು ದೂರಿದರು.

ಅಮಿತ್ ಶಾ ಹಾಗೂ ಸಿ.ಟಿ.ರವಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೇ ಸಿ.ಟಿ.ರವಿಯನ್ನು ಜಿಲ್ಲೆಯ ಜನತೆ ಹೇಗೆ ತಿರಸ್ಕರಿಸಿದ್ದಾರೋ ಹಾಗೆಯೇ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷವನ್ನು ಜನತೆ ತಿರಸ್ಕರಿಸಲಿದ್ದಾರೆ ಎಂದು ಎಚ್ಚರಿಸಿದರು.

ಮುಖಮಡ ಎಂ.ಎಲ್.ಮೂರ್ತಿ ಮಾತನಾಡಿ, ಜನಪ್ರತಿನಿಧಿಗಳು ಆದರ್ಶವಾಗಿರಬೇಕು ಆದರೆ, ಗೋಮುಖ ವ್ಯಾಘ್ರರಂತೆ ವರ್ತಿಸುತ್ತಿದ್ದಾರೆ. ನಾಯಕರು ನಾಲಿಗೆ ಮೇಲೆ ಹಿಡಿತ ಸಾಧಿಸಬೇಕು. ಹದ್ದುಮೀರಿ ವರ್ತಿಸುವವರನ್ನು ಮಟ್ಟ ಹಾಕಬೇಕು. ಇಂತವರನ್ನು ಜನರು ಮನೆಗೆ ಕಳಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ರೇಖಾ ಹುಲಿಯಪ್ಪಗೌಡ, ನಯಾಜ್ ಅಹ್ಮದ್‌, ಎಚ್.ಪಿ.ಮಂಜೇಗೌಡ, ಅನಿಲ್ ಕುಮಾರ್, ಬಿ.ಎಚ್.ಹರೀಶ್, ಶಿವಾನಂದಸ್ವಾಮಿ, ಮಲ್ಲೇಸ್ವಾಮಿ, ಡಾ.ವಿಜಯಕುಮಾರ್, ಪುಟ್ಟೇಗೌಡ, ಸಂತೋಷ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದವರು ಪ್ರತಿಭಟನೆ ಮಾಡುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಸಿ.ಟಿ.ರವಿ ಪರ ಘೋಷಣೆ ಕೂಗುತ್ತ ಸ್ಥಳಕ್ಕೆ ಬಂದರು. ಈ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧವೂ ಜೋರು ಧ್ವನಿಯಲ್ಲಿ ಘೋಷಣೆ ಕೂಗಿದರು. ಇದಕ್ಕೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ಈ ವೇಳೆ ಬಿಜೆಪಿ ಸಚಿನ್ ಎಂಬವರಿಗೆ ಕಾಂಗ್ರೆಸ್ ಕಾರ್ಯಕರ್ತರು ಗೂಸ ನೀಡಿದರು. ಸ್ಥಳದಲ್ಲಿದ್ದ ಪೊಲೀಸರು ಎರಡೂ ಪಕ್ಷದವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News