ಹಿಂದುಳಿದಿರುವ ಜಾತಿಗೆ ಸಾಮಾಜಿಕ ನ್ಯಾಯ ಕಲ್ಪಿಸುವುದು ಸರಕಾರದ ಜವಾಬ್ದಾರಿ : ಸಚಿವ ಈಶ್ವರ್ ಖಂಡ್ರೆ
ಚಿಕ್ಕಮಗಳೂರು : ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಈ ತತ್ವದ ಆಧಾರದ ಮೇಲೆಯೇ ಕಾಂಗ್ರೆಸ್ ಇದುವರೆಗೂ ಆಡಳಿತ ನಡೆಸಿಕೊಂಡು ಬಂದಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಜಾತಿ, ಜನಾಂಗದವರಿಗೆ ಮೀಸಲಾತಿ ಕಲ್ಪಿಸಿ ಅವರನ್ನು ಮುಖ್ಯವಾಹಿನಿಗೆ ತರುವುದು ಸರಕಾರ ಕರ್ತವ್ಯವಾಗಿದೆ. ಇದನ್ನು ಕಾಂಗ್ರೆಸ್ ಸರಕಾರ ಮಾಡಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಪಂಚಮಸಾಲಿಗಳ ಚಳವಳಿ ಸಂಬಂದ ರವಿವಾರ ಬಾಳೆಹೊನ್ನೂರು ಪಟ್ಟಣದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷ ಬಸವಣ್ಣ, ಅಂಬೇಡ್ಕರ್ ತತ್ವಗಳ ಮೇಲೆ ನಡೆಯುತ್ತಿರುವ ಪಕ್ಷವಾಗಿದೆ. ಹಿಂದುಳಿದಿರುವ ಯಾವ ಜಾತಿಗೂ ಅನ್ಯಾಯವಾಗಲು ನಮ್ಮ ಪಕ್ಷ ಬಿಡುವುದಿಲ್ಲ. ರಾಜ್ಯದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ಯಾವ ಜಾತಿಗೂ ಅನ್ಯಾಯ ಆಗುವುದಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ಶಾಶ್ವತ ಹಿಂದುಳಿದ ಆಯೋಗದವರು ಸಭೆ ನಡೆಸುತ್ತಾರೆ. ಸಾಮಾಜಿಕ, ಶೈಕ್ಷಣಿಕ ಆಧಾರದಲ್ಲಿ ಸಮೀಕ್ಷೆ ನಡೆಸುತ್ತಾರೆ. ಸಮೀಕ್ಷೆಯಲ್ಲಿ ಯಾವ ಜಾತಿ ಹೆಚ್ಚು ಹಿಂದುಳಿದಿದೆ ಎಂಬುದು ಗೊತ್ತಾಗುತ್ತದೆ. ಇಂತಹ ಜಾತಿಗಳನ್ನು ಗುರುತಿಸಿ ಸಾಮಾಜಿಕ ನ್ಯಾಯ ಕಲ್ಪಿಸುವುದು ಸರಕಾರದ ಜವಬ್ದಾರಿಯಾಗಿದೆ. ಇದನ್ನು ನಮ್ಮ ಸರಕಾರ ಮಾಡಲಿದೆ ಎಂದರು.
ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಉನ್ನತಿ ಸಾಧಿಸುವುದು ಸಂವಿಧಾನಿಕ ಹಕ್ಕು. ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸಿ ಮುಖ್ಯವಾಹಿನಿಗೆ ಬರುವಂತೆ ಮಾಡುವುದು ಸರಕಾರದ ಜವಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸರಕಾರ ಅಗತ್ಯ ಕ್ರಮವಹಿಸಲಿದೆ ಎಂದು ಇದೇ ವೇಳೆ ಅವರು ಹೇಳಿದರು.