ದತ್ತಜಯಂತಿ ಭದ್ರತೆಗೆ 4 ಸಾವಿರ ಸಿಬ್ಬಂದಿ ನೇಮಕ : ಎಸ್ಪಿ ಡಾ.ವಿಕ್ರಮ್ ಅಮಟೆ

Update: 2024-12-09 17:41 GMT

ಚಿಕ್ಕಮಗಳೂರು : ಶ್ರೀ ಇನಾಂ ದತ್ತಾತ್ರೇಯ ಸ್ವಾಮಿ ಬಾಬಾಬುಡಾನ್ ದರ್ಗಾದಲ್ಲಿ ಡಿ.12ರಿಂದ 14ರವರೆಗೆ ನಡೆಯಲಿರುವ ದತ್ತಜಯಂತಿ ಕಾರ್ಯಕ್ರಮಕ್ಕೆ ಪೊಲೀಸ್ ಭದ್ರತೆ ಕಳೆದ ಬಾರಿಯಂತೆಯೇ ಇರಲಿದೆ. ಈ ಬಾರಿ ಬಂದೋಬಸ್ತ್‌ಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ತಿಳಿಸಿದ್ದಾರೆ.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ 4 ಸಾವಿರ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಸುಮಾರು 100 ಬಾಡಿ ಕ್ಯಾಮರಾ, ಹ್ಯಾಂಡಿ ಕ್ಯಾಮರಾಗಳನ್ನೂ ಭದ್ರತೆಗೆ ಒದಗಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಭಕ್ತರ ಪ್ರತೀ ವಾಹನ ತಪಾಸಣೆ ನಡೆಸಿ ಕರ ಪತ್ರಗಳ ಮೂಲಕ ಕಾನೂನು ಸುವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.

ದತ್ತಜಯಂತಿ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಿಎಚ್‌ಪಿ, ಬಜರಂಗದಳದ ಮುಖಂಡರೊಂದಿಗೆ ಸಭೆ ನಡೆಸಿ ಜಿಲ್ಲಾ ಪೊಲೀಸ್ ಇಲಾಖೆಯ ನಿರ್ದೇಶನಗಳ ಬಗ್ಗೆ ಮನವರಿಕೆ ಮಾಡಲಾಗಿದೆ. ಇದೇ ರೀತಿಯಲ್ಲಿ ಇತರ ಸಮುದಾಯದ ಧಾರ್ಮಿಕ ಮುಖಂಡರ ಸಮ್ಮುಖದಲ್ಲಿ ಶಾಂತಿ ಸಭೆಯನ್ನೂ ನಡೆಸಲಾಗಿದೆ ಎಂದು ಎಸ್ಪಿ ಹೇಳಿದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ದತ್ತಜಯಂತಿ ಕಾರ್ಯಕ್ರಮವನ್ನು ಅತ್ಯಂತ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಜಿಲ್ಲಾಡಳಿತ ಅಗತ್ಯವಿರುವ ಎಲ್ಲ ಪೂರ್ವ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೀರು, ಶೌಚಾಲಯ, ಸುಗಮ ವಾಹನ ಸಂಚಾರ ಮತ್ತು ವಾಹನಗಳ ನಿಲುಗಡೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಸಂದರ್ಭ ನ್ಯಾಯಾಲಯದ ಆದೇಶ ಮೀರಿ ಶಾಂತಿ ಸಾಮರಸ್ಯಕ್ಕೆ ಧಕ್ಕೆ ತರುವ ಮೂಲಕ ಕಾನೂನು ಸುವ್ಯವಸ್ಥೆಗೆ ಭಂಗವನ್ನುಂಟು ಮಾಡುವ, ಅಹಿತಕರ ಘಟನೆಗಳಿಗೆ ಕುಮ್ಮಕ್ಕು ನೀಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಡಿ.12ರಿಂದ 14ರವರೆಗೆ ದತ್ತಜಯಂತಿ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಬಾಬಾ ಬುಡಾನ್ ದರ್ಗಾ, ಪೀಠಕ್ಕೆ ಬರುವ ಎಲ್ಲ ಭಕ್ತರಿಗೆ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ದತ್ತ ಪಾದುಕೆಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದ ಡಿಸಿ, ದತ್ತಪೀಠ ಸಂಪರ್ಕ ರಸ್ತೆ ಅತ್ಯಂತ ಕಿರಿದಾದ ರಸ್ತೆಯಾಗಿರುವುದು, ಭಾರೀ ಮಳೆಯಿಂದಾಗಿ ಅಲ್ಲಲ್ಲಿ ರಸ್ತೆಗಳಿಗೆ ಹಾನಿಯಾಗಿರುವುದು ಹಾಗೂ ಭಾರೀ ಪ್ರಮಾಣದಲ್ಲಿ ಭಕ್ತರು ವಿವಿಧ ವಾಹನಗಳಲ್ಲಿ ದತ್ತಪೀಠಕ್ಕೆ ಬರುವ ಹಿನ್ನೆಲೆಯಲ್ಲಿ ವಾಹನಗಳ ದಟ್ಟಣೆ ನಿಯಂತ್ರಣ ಮತ್ತು ಟ್ರಾಫಿಕ್ ಜಾಮ್‌ನಂತಹ ಘಟನೆಗಳ ನಿಯಂತ್ರಣ ಮಾಡುವ ಉದ್ದೇಶದಿಂದ ಈ ಬಾರಿ ಲಾಂಗ್‌ಚಾರ್ಸಿ ಬಸ್‌ಗಳು ಮತ್ತು ಬೃಹತ್ ವಾಹನಗಳಲ್ಲಿ ದತ್ತಪೀಠಕ್ಕೆ ಹೋಗಲು ಅವಕಾಶ ಇರುವುದಿಲ್ಲ. ಲಾಂಗ್ ಚಾರ್ಸಿ ವಾಹನಗಳಲ್ಲಿ ಬರುವ ಭಕ್ತರು ಇಂತಹ ವಾಹನಗಳನ್ನು ಜಿಲ್ಲಾಡಳಿತ ಅಲ್ಲಂಪುರ ಗ್ರಾಮದಲ್ಲಿ ಗುರುತಿಸಿರುವ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ ಜಿಲ್ಲಾಡಳಿತದಿಂದಲೇ ವ್ಯವಸ್ಥೆ ಮಾಡಿರುವ ಲಘು ವಾಹನಗಳಲ್ಲಿ ದತ್ತಪೀಠಕ್ಕೆ ಹೋಗಬಹುದಾಗಿದೆ ಎಂದರು.

ಪ್ರತೀ ವರ್ಷ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ದತ್ತಜಯಂತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಬಾರಿಯೂ ನ್ಯಾಯಾಲಯದ ಆದೇಶದಂತೆಯೇ ಆಚರಣೆ ನಡೆಸಲು ವ್ಯವಸ್ಥಾಪನಾ ಸಮಿತಿಗೆ ಅನುಮತಿ ನೀಡಲಾಗಿದೆ. ನ್ಯಾಯಾಲಯದ ಆದೇಶ ಮೀರಿ ಯಾವುದೇ ಹೊಸ ಆಚರಣೆಗಳಿಗೆ ಅವಕಾಶ ಇರುವುದಿಲ್ಲ. ಈ ಬಗ್ಗೆ ಕಾರ್ಯಕ್ರಮದ ಆಯೋಜಕರು, ಮುಖಂಡರ ಸಭೆ ನಡೆಸಿ ಮನವರಿಕೆ ಮಾಡಲಾಗಿದೆ. ಇದಕ್ಕೆ ಮುಖಂಡರೂ ಸಮ್ಮತಿಸಿದ್ದಾರೆ ಎಂದರು.

ದತ್ತಜಯಂತಿ ಹಿನ್ನೆಲೆಯಲ್ಲಿ ಡಿ.13ರಂದು ಬೆಳಗ್ಗೆ 6ರಿಂದ ಡಿ.15 ಬೆಳಗ್ಗೆ 6ರವರೆಗೆ ಜಿಲ್ಲಾದ್ಯಂತ ಮದ್ಯದಂಗಡಿಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ. ಅಕ್ರಮವಾಗಿ ಮದ್ಯ ಮಾರಾಟ ಮಾಡುವುದು, ಮದ್ಯಪಾನ ಮಾಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಮೂರು ದಿನಗಳ ಕಾಲ ಮದ್ಯದಂಗಡಿ ಬಂದ್ ಮಾಡುವುದರಿಂದ ಭಾರೀ ನಷ್ಟ ಆಗಲಿದೆ ಎಂದು ಮದ್ಯದಂಗಡಿಗಳ ಮಾಲಕರು ಮನವಿ ಮಾಡಿದ್ದರಿಂದ ಡಿ.13 ಮತ್ತು 14ರಂದು ಎರಡು ದಿನಗಳ ಕಾಲ ಮದ್ಯದಂಗಡಿಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಉಪಸ್ಥಿತರಿದ್ದರು.

ಬಾಬಾ ಬುಡಾನ್ ದರ್ಗಾ, ದತ್ತಪೀಠಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಬರುವ ಸಾಧ್ಯತೆವಿರುವುದರಿಂದ ಈ ಮೂರು ದಿನಗಳ ಕಾಲ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡಬೇಕು. ಸ್ಥಳೀಯ ಹೋಮ್ ಸ್ಟೇ, ರೆಸಾರ್ಟ್‌ಗಳಲ್ಲಿ ಈಗಾಗಲೇ ಬುಕ್ಕಿಂಗ್ ಮಾಡಿರುವ ಪ್ರವಾಸಿಗರಿಗೆ ಇದು ಅನ್ವಯ ಆಗುವುದಿಲ್ಲ. ಮೂರು ದಿನಗಳವರೆಗೆ ಮಧ್ಯಾಹ್ನ 2ರವರೆಗೆ ಮಾತ್ರ ಭಕ್ತರ ವಾಹನಗಳಿಗೆ ಪ್ರವೇಶ ಇರುತ್ತದೆ. ಗುಹೆಯೊಳಗೆ ಮೊಬೈಲ್ ಕೊಂಡೊಯ್ಯುವುದು ಮತ್ತು ಚಿತ್ರೀಕರಣವನ್ನು ನಿಷೇಧಿಸಲಾಗಿದೆ.

ಮೀನಾ ನಾಗರಾಜ್, ಜಿಲ್ಲಾಧಿಕಾರಿ

ದತ್ತಜಯಂತಿ ಹಿನ್ನೆಲೆಯಲ್ಲಿ ಬ್ಯಾನರ್, ಬಂಟಿಂಗ್ಸ್ ಕಟ್ಟಲು ಸಂಬಂಧಿಸಿದ ಪೊಲೀಸ್ ಇಲಾಖೆ, ಗ್ರಾಪಂ, ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಡಾ.ವಿಕ್ರಮ್ ಅಮಟೆ, ಎಸ್ಪಿ

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News