ಚಿಕ್ಕಮಗಳೂರು | ಪತ್ನಿಯನ್ನು ವರ್ಷಗಟ್ಟಲೆ ಗೃಹ ಬಂಧನದಲ್ಲಿರಿಸಿದ ಪತಿ ; ಆರೋಪ

Update: 2024-12-12 09:54 GMT

ಸಂತ್ರಸ್ತ ಮಹಿಳೆ

ಚಿಕ್ಕಮಗಳೂರು : ಪತಿಯೊಬ್ಬ ಪತ್ನಿಗೆ ಮಾನಸಿಕ ಕಿರುಕುಳ ನೀಡಿ, ಸರಿಯಾಗಿ ಅನ್ನ-ನೀರು ನೀಡದೇ ವರ್ಷಗಟ್ಟಲೇ ಗೃಹ ಬಂಧನದಲ್ಲಿರಿಸಿದ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.

ಪತಿ ವೃತ್ತಿಯಲ್ಲಿ ವೈದ್ಯನಾಗಿದ್ದರೂ ಪತ್ನಿಯನ್ನು ಮಾನವೀಯತೆ ಮರೆತು ಹೊರ ಪ್ರಪಂಚಕ್ಕೆ ಹೋಗದಂತೆ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಪತಿ ರವಿಕುಮಾರ್ ವಿರುದ್ಧ ಆರೋಪ ಕೇಳಿ ಬಂದಿದೆ.

ಚಿಕ್ಕಮಗಳೂರು ನಗರದ ದೋಣಿಕಣ ಸಮೀಪದ ಮನೆಯಲ್ಲಿ ವೈದ್ಯ, ತನ್ನ ಪತ್ನಿ ವಿನುತಾರಾಣಿಗೆ ಚಿತ್ರಹಿಂಸೆ ನೀಡಿ ಕಿರುಕುಳ ಕೊಡುತ್ತಿದ್ದಾರೆ. ಮಾನಸಿಕ, ದೈಹಿಕ ಕಿರುಕುಳವನ್ನು ನೀಡಿ ಮನಸೋ ಇಚ್ಛೆ ಥಳಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೆ, ಮಹಿಳೆಯ ಮಗನಿಗೂ ಕೂಡ ತಾಯಿಯ ಮೇಲೆ ಜಿಗುಪ್ಸೆ ಬರುವಂತೆ ಮಾಡಿ ತಾಯಿಯಿಂದ ಮಗನನ್ನು ದೂರ ಇರುವಂತೆ ಮಾಡಿರುವ ಆರೋಪವೂ ಕೇಳಿ ಬಂದಿದೆ. ಇಂದು ಬೆಳಗ್ಗೆ ವಿನುತಾ ರಾಣಿಯ ಸಹೋದರ ವಾಗೀಶ್ ಕುಮಾರ್, ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ಮನೆಯ ಬಾಗಿಲು ಒಡೆದು ಗೃಹಬಂಧನದಲ್ಲಿದ್ದ ಮಹಿಳೆಯನ್ನು ಹೊರಗೆ ಕರೆತಂದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೊಬೈಲ್ ಬಳಸದಂತೆ, ಸಾರ್ವಜನಿಕರ ಸಂಪರ್ಕವೂ ಸಿಗದಂತೆ ಮನೆಯಲ್ಲಿಯೇ ಕೂಡಿಹಾಕಿದ ಆರೋಪ ಕೇಳಿ ಬಂದಿದೆ.

ಪೊಲೀಸರಿಗೆ ಈ ಸುದ್ದಿ ತಿಳಿಯುತ್ತಿದ್ದಂತೆ ಮಹಿಳೆಯ ಪತಿ ರವಿಕುಮಾರ್ ನಾಪತ್ತೆಯಾಗಿದ್ದಾನೆ. ಮಹಿಳೆಯನ್ನು ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರವಿಕುಮಾರ್ ವೃತ್ತಿಯಲ್ಲಿ ವೈದ್ಯರಾಗಿದ್ದು, ಡಾ. ರವಿಕುಮಾರ್ ಹಾಸನದ ಆಸ್ಪತ್ರೆವೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. 22 ವರ್ಷಗಳ ಹಿಂದೆ ಡಾ.ರವಿಕುಮಾರ್, ವಿನುತಾರಾಣಿ (48) ಅವರನ್ನು ವಿವಾಹವಾಗಿದ್ದ. ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಇಬ್ಬರು ಬೇರೆಯಾಗಿದ್ದಾರೆ. ಕಳೆದ 1 ವರ್ಷದ ಹಿಂದೆ ವಿನುತಾರಾಣಿ ಅವರಿಗೆ ಡಾ.ರವಿಕುಮಾರ್ ವಿಚ್ಛೇದನ ನೀಡಿದ್ದಾರೆ.

ವಿನುತಾ ರಾಣಿ ಮೂಲತಃ ಶಿವಮೊಗ್ಗದ ವಿನೋಬಾನಗರದವರು, ಆದರೆ ವಿಚ್ಛೇದನ ನೀಡಿ ಕೂಡಾ ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿದ್ದಾನೆ ಎಂದು ವಿನುತಾ ರಾಣಿ ಅವರ ಮನೆಯವರು ಆರೋಪಿಸಿದ್ದಾರೆ. ಡಾ.ರವಿಕುಮಾರ್ ವಿನುತಾ ರಾಣಿಗೆ ಚಿತ್ರಹಿಂಸೆ ನೀಡಿರುವ ಬಗ್ಗೆಯೂ ದೂರಿನಲ್ಲಿ ತಿಳಿಸಲಾಗಿದೆ.

ಆಕೆಯ ಗಂಡ ಊಟದಲ್ಲಿ ಮತ್ತಿನ ಔಷಧ ನೀಡುತ್ತಿದ್ದ, ಜತೆಗೆ ಮನೆಯಲ್ಲೇ ಬಂಧಿಸಿ ಚಿತ್ರಹಿಂಸೆ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ. ಇದೀಗ ಮಹಿಳೆಯ ಕುಟುಂಬದವರು ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ವಿನುತಾ ರಾಣಿ ತೀವ್ರ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಕುಟುಂಬ ಹಾಗೂ ಮಹಿಳೆಯ ಹೇಳಿಕೆ ಆಧಾರದ ಮೇಲೆ ದೂರು ದಾಖಲಿಸಿಕೊಂಡು ನಾಪತ್ತೆಯಾಗಿರುವ ಡಾ.ರವಿಕುಮಾರ್​​​ನ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News