ಬೊಮ್ಮಾಯಿ ಸರಕಾರದ ಅವಧಿಯಲ್ಲಿ ವಕ್ಫ್ ಆಸ್ತಿ ವಶಕ್ಕೆ ಪಡೆಯಲು 300ಕ್ಕೂ ಹೆಚ್ಚು ನೋಟಿಸ್ ನೀಡಲಾಗಿತ್ತು : ಎಂ.ಪಿ.ಕುಮಾರಸ್ವಾಮಿ
ಚಿಕ್ಕಮಗಳೂರು : ವಕ್ಫ್ ಆಸ್ತಿಯನ್ನು ವಶಕ್ಕೆ ಪಡೆಯಬೇಕೆಂದು 1998ರಲ್ಲಿ ಸುಪ್ರೀಂಕೋರ್ಟ್ ಆದೇಶಿಸಿದೆ. ಹಿಂದಿನ ಬಿಜೆಪಿ ಸರಕಾರ ವಕ್ಫ್ ಆಸ್ತಿ ವಶಕ್ಕೆ ಪಡೆಯುವ ಉದ್ದೇಶದಿಂದ ಮುನ್ನೂರಕ್ಕೂ ಹೆಚ್ಚು ರೈತರಿಗೆ ನೋಟಿಸ್ ನೀಡಿತ್ತು. ವಕ್ಫ್ ಆಸ್ತಿಗಳ ವಿಚಾರದಲ್ಲಿ ಬಿಜೆಪಿ ವಿನಾಕಾರಣ ವಿವಾದ ಸೃಷ್ಟಿಸುತ್ತಿದ್ದು, ಇದರ ಹಿಂದೆ ರಾಜಕೀಯ ಲಾಭದ ಹುನ್ನಾರ ಅಡಗಿದೆ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಆಸ್ತಿ ವಿಚಾರದಲ್ಲಿ ರಾಜ್ಯ ಸರಕಾರ ಕೆಲ ರೈತರಿಗೆ ನೋಟಿಸ್ ನೀಡಿರುವ ವಿಚಾರವನ್ನು ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ವಿವಾದವನ್ನಾಗಿಸಿದ್ದರು. ಮೂರು ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಈ ವಿವಾದದಿಂದ ಲಾಭ ಆಗುವ ನಿರೀಕ್ಷೆ ಹೊಂದಿದ್ದರು. ಆದರೆ ಬಿಜೆಪಿ ಹುನ್ನಾರ ಅರಿತ ಮತದಾರರು ಬಿಜೆಪಿ ತಿರಸ್ಕರಿಸಿ ಕಾಂಗ್ರೆಸ್ ಕೈಹಿಡಿದಿದ್ದಾರೆ ಎಂದರು.
ವಕ್ಫ್ ಆಸ್ತಿಗಳನ್ನು ಮಂಡಳಿ ತನ್ನ ವಶಕ್ಕೆ ಪಡೆಯಬೇಕು ಎಂದು ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಬೊಮ್ಮಾಯಿ ಅವರೇ ಮುಸ್ಲಿಂ ಮುಖಂಡರ ಸಭೆಯಲ್ಲಿ ಸೂಚಿಸಿದ್ದರು. ಅಲ್ಲದೇ ವಕ್ಫ್ ಆಸ್ತಿ ವಶಕ್ಕೆ ಪಡೆಯುವ ಉದ್ದೇಶದಿಂದ ಬಿಜೆಪಿ ಸರಕಾರದ ಅವಧಿಯಲ್ಲಿ 300ಕ್ಕೂ ಹೆಚ್ಚು ನೋಟಿಸ್ ಜಾರಿ ಮಾಡಿತ್ತು ಎಂದ ಅವರು, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕೆಲ ರೈತರಿಗೆ ನೀಡಲಾಗಿದ್ದ ನೋಟಿಸ್ ವಿಚಾರ ಮುಂದಿಟ್ಟುಕೊಂಡು ಬಿಜೆಪಿಯವರು ವಿವಾದ ಸೃಷ್ಟಿಸಿ ಸಾಮರಸ್ಯ ಹದಗೆಡಿಸುವುತ್ತಿರುವುದು ಸರಿಯಲ್ಲ. ಈ ವಿಚಾರದಲ್ಲಿ ಕೆಸರೆರಚಾಟವೂ ಸರಿಯಲ್ಲ. ವಕ್ಫ್ ಆಸ್ತಿ ಎಂದರೆ ಒಂದು ಕೋಮಿನವರ ಆಸ್ತಿಯಲ್ಲ, ಅದು ಸರಕಾರದ ಆಸ್ತಿ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸರಕಾರದ ಆಸ್ತಿಯಾಗಿರುವ ಕಾರಣಕ್ಕೆ ವಕ್ಫ್ ಖಾತೆ ಸಚಿವರನ್ನು ನೇಮಿಸಲಾಗುತ್ತಿದೆ ಎಂದರು.
ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಮಾತನಾಡಿ, ಉತ್ತರಪ್ರದೇಶದ ಸಂಭಲ್‍ನಲ್ಲಿ ಸಂಭವಿಸಿರುವ ಹಿಂಸಾಚಾರದಲ್ಲಿ ಸಂತ್ರಸ್ಥರ ಅಳಲು ಕೇಳಲು ರಾಹುಲ್ ಗಾಂಧಿ ಭೇಟಿ ನೀಡಲು ತೆರಳಿದ್ದ ವೇಳೆ ಯುಪಿ ಸಿಎಂ ಪೊಲೀಸರ ಮೂಲಕ ಲೋಕಸಭೆ ವಿರೋಧ ಪಕ್ಷದ ನಾಯಕನನ್ನು ತಡೆದಿದ್ದಾರೆ. ಇದು ಖಂಡನೀಯ, ಹಿಂಸಾಚಾರವೊಂದರಲ್ಲಿ ನೊಂದವರ ಅಳಲು ಕೇಳುವುದು ತಪ್ಪಾ?, ಮೋದಿ ಸರಕಾರ ಕೂಡ ತನ್ನ ಆಡಳಿತ ಬಲದ ಮೂಲಕ ರಾಹುಲ್ ಭೇಟಿಗೆ ತಡೆಯೊಡ್ಡಿದೆ. ಇದು ಸರ್ವಾಧಿಕಾರದ ಧೋರಣೆಯಾಗಿದ್ದು, ಈ ನಡವಳಿಕೆ ಮೋದಿ ಹಾಗೂ ಯುಪಿ ಸಿಎಂ ಕ್ರೌರ್ಯದ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನಟರಾಜ್, ಸಂತೋಷ್, ಶ್ರೀನಿವಾಸ್, ಕಾಂತರಾಜ್ ಅರಸ್, ವಿಜಯ್‍ಕುಮಾರ್, ನಿಜಗುಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.