ಬಾಳೆಹೊನ್ನೂರು : ಚಾಕುವಿನಿಂದ ಇರಿದು ಗೃಹಿಣಿಯ ಬರ್ಬರ ಹತ್ಯೆ
ಚಿಕ್ಕಮಗಳೂರು : ವ್ಯಕ್ತಿಯೋರ್ವ ಗೃಹಿಣಿಯನ್ನು ಹತ್ಯೆ ಮಾಡಿ ಮೃತದೇಹವನ್ನು ಕೆರೆಗೆ ಎಸೆದು ಪರಾರಿಯಾಗಿರುವ ಘಟನೆ ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಶನಿವಾರ ವರದಿಯಾಗಿದೆ.
ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಿಚ್ಚಬ್ಬಿ ಗ್ರಾಮದ ತೃಪ್ತಿ ಹತ್ಯೆಯಾದ ಗೃಹಿಣಿಯಾಗಿದ್ದು, ಪರಾರಿಯಾಗಿರುವ ಆರೋಪಿ ಚಿರಂಜೀವಿ ಎಂದು ತಿಳಿದು ಬಂದಿದೆ.
ಕಿಚ್ಚಬ್ಬಿ ಗ್ರಾಮದ ರಾಜೇಶ್ ಎಂಬವರ ಪತ್ನಿಯಾಗಿದ್ದ ತೃಪ್ತಿ ಎರಡು ಮಕ್ಕಳ ತಾಯಿಯಾಗಿದ್ದು, ಇತ್ತೀಚೆಗೆ ಈಕೆಗೆ ಚಿರಂಜೀವಿ ಎಂಬಾತ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ. ಬಳಿಕ ಪರಿಚಯ ಪ್ರೀತಿಗೆ ತಿರುಗಿತ್ತೆನ್ನಲಾಗಿದ್ದು, ತಿಂಗಳ ಹಿಂದೆ ತೃಪ್ತಿ ಪತಿ, ಮಕ್ಕಳನ್ನು ಬಿಟ್ಟು ಆತನೊಂದಿಗೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಪತಿ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ತೃಪ್ತಿ ಪತ್ತೆಯಾದ ಸಂದರ್ಭದಲ್ಲಿ ರಾಜಿ ಸಂಧಾನ ನಡೆದಿದ್ದು, ಆ ಬಳಿಕ ತೃಪ್ತಿ ಚಿರಂಜೀವಿಯೊಂದಿಗೆ ಸ್ನೇಹ, ಮಾತುಕತೆ ನಿಲ್ಲಿಸಿದ್ದಳು. ಇದರಿಂದ ಕುಪಿತನಾಗಿದ್ದ ಚಿರಂಜೀವಿ ಶನಿವಾರ ತೃಪ್ತಿ ಪತಿ ಮನೆಯಲ್ಲಿ ಇಲ್ಲದಿರುವುದನ್ನು ಖಾತ್ರಿಪಡಿಸಿಕೊಂಡು ಮಾತನಾಡಿಸುವ ನೆಪದಲ್ಲಿ ಕಿಚ್ಚಬ್ಬಿ ಗ್ರಾಮದಲ್ಲಿರುವ ತೃಪ್ತಿ ಮನೆಗೆ ಬಂದಿದ್ದ. ಈ ವೇಳೆ ಮಕ್ಕಳ ಎದುರಲ್ಲೇ ಆಕೆಗೆ ಚಾಕುವಿನಿಂದ ತಿವಿದಿದ್ದಾನೆ. ಚಾಕು ಇರಿತಕ್ಕೊಳಗಾದ ತೃಪ್ತಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವಂತೆಯೇ ಮನೆ ಬಳಿ ಇದ್ದ ಕೆರೆಗೆ ತಳ್ಳಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯ ಬಂಧನಕ್ಕೆ ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ 4 ತಂಡ ರಚಿಸಲಾಗಿದೆ ಎಂದು ಎಸ್ಪಿ ಡಾ.ವಿಕ್ರಮ್ ಅಮಟೆ ತಿಳಿಸಿದ್ದಾರೆ.