ಚಿಕ್ಕಮಗಳೂರು | ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧ ; ರಕ್ಷಣೆಗೆ ಪೊಲೀಸರ ಮೊರೆ ಹೋದ ಪ್ರೇಮಿಗಳು

Update: 2024-12-18 18:02 GMT

ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು : ಪೋಷಕರ ವಿರೋಧದ ನಡುವೆಯೂ ಅಂತರ್ಜಾತಿ ಪ್ರೇಮಿಗಳು ವಿವಾಹವಾಗಿದ್ದು, ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೆಟ್ಟಿಲೇರಿರುವ ಘಟನೆ ಬುಧವಾರ ನಗರದಲ್ಲಿ ವರದಿಯಾಗಿದೆ.

ಅಜಯ್ ಹಾಗೂ ಶಾಲಿನಿ ಪ್ರೇಮಿಗಳಾಗಿದ್ದು, ಜಾತಿ ಕಾರಣಕ್ಕೆ ಇಬ್ಬರ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಬೇಸತ್ತ ಪ್ರೇಮಿಗಳು ಬುಧವಾರ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದು, ನಂತರ ರಕ್ಷಣೆ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆಯವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.

ದಲಿತ ಸಂಘರ್ಷ ಸಮಿತಿ ಮುಖಂಡ ಮರ್ಲೆ ಅಣ್ಣಯ್ಯ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದ ಅಂತರ್ಜಾತಿ ವಿವಾಹವಾಗಿದ್ದ ಪ್ರೇಮಿಗಳು ದೇವಸ್ಥಾನದಲ್ಲಿ ಮದುವೆಯಾದ ನಂತರವೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಹಾರ ಬದಲಾಯಿಸಿಕೊಂಡರು.

ಘಟನೆ ಸಂಬಂಧ ಮಾಹಿತಿ ಪಡೆದು ಸುದ್ದಿಗಾರರ ಜತೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಅಜಯ್ ಮತ್ತು ಶಾಲಿನಿ ಅಂತರ್ಜಾತಿ ಪ್ರೇಮಿಗಳಾಗಿದ್ದು, ಕುಟುಂಬಸ್ಥರು ಮದುವೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಇಬ್ಬರೂ ವಯಸ್ಕರಾಗಿದ್ದು, ಕಾನೂನಿನಲ್ಲಿ ಇವರ ವಿವಾಹಕ್ಕೆ ಮಾನ್ಯತೆ ಇದೆ. ಶಾಲಿನಿ ಭದ್ರಾವತಿ ಮೂಲದವರು, ಅಜಯ್ ತರೀಕೆರೆ ತಾಲೂಕು ಲಕ್ಕವಳ್ಳಿ ಸಮೀಪದ ರಂಗೇನಹಳ್ಳಿಯವರಾಗಿದ್ದಾರೆ. ರಕ್ಷಣೆ ಬೇಕೆಂದು ಭೇಟಿಯಾಗಿದ್ದಾರೆ. ಅಜಯ್ ಪೋಷಕರು ಮತ್ತು ಶಾಲಿನಿ ಪೋಷಕರನ್ನು ಕರೆದು ಮಾತನಾಡುವಂತೆ ತರೀಕೆರೆ ಪೊಲೀಸ್ ಠಾಣಾಧಿಕಾರಿಗೆ ಸೂಚನೆ ನೀಡಲಾಗಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News