ಚಿಕ್ಕಮಗಳೂರು | ದಲಿತ ಯುವಕರು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಪೂಜೆ ಸ್ಥಗಿತ : ದೇಗುಲಕ್ಕೆ ಬೀಗ ಹಾಕಿದ ತಹಶೀಲ್ದಾರ್

Update: 2024-12-04 15:29 GMT

ಸಾಂದರ್ಭಿಕ ಚಿತ್ರ | PC : istockphoto

ಚಿಕ್ಕಮಗಳೂರು : ದಲಿತ ಯುವಕರು ದೇವಸ್ಥಾನ ಪ್ರವೇಶಿಸಿದ ಕಾರಣಕ್ಕೆ ಗ್ರಾಮಸ್ಥರು ದೇವಾಲಯದಲ್ಲಿ ಪೂಜೆ ಸಲ್ಲಿಸದೆ ಹಿಂದಿರುಗಿದ ಘಟನೆ ತಾಲೂಕಿನ ಬೆಳವಾಡಿ ಸಮೀಪದ ನರಸೀಪುರ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಶೀಲ್ದಾರ್ ಡಾ.ಸುಮಂತ್, ರಾಜಸ್ವ ನಿರೀಕ್ಷಕರು ಭೇಟಿ ನೀಡಿ ತಿರುಮಲೇಶ್ವರ ದೇವಸ್ಥಾನಕ್ಕೆ ಬೀಗ ಹಾಕಿದ್ದಾರೆಂದು ತಿಳಿದು ಬಂದಿದೆ.

ನರಸೀಪುರ ಗ್ರಾಮದಲ್ಲಿ 200 ಕುರುಬ ಸಮುದಾಯದ ಕುಟುಂಬಗಳು ವಾಸವಾಗಿದ್ದರೆ, ಪರಿಶಿಷ್ಟ ಜಾತಿ ಸಮುದಾಯದ 13ರಿಂದ 15 ಕುಟುಂಬದವರು ಮಾತ್ರ ಈ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಗ್ರಾಮದ ತಿರುಮಲೇಶ್ವರ ದೇವಸ್ಥಾನಕ್ಕೆ ಹಿಂದಿನಿಂದಲೂ ಪರಿಶಿಷ್ಟ ಜಾತಿಯವರು ಪ್ರವೇಶಿಸುತ್ತಿರಲಿಲ್ಲ ಎನ್ನಲಾಗಿದೆ.

ಆದರೆ, ಗ್ರಾಮದ ಇಬ್ಬರು ಪರಿಶಿಷ್ಟ ಜಾತಿ ಯುವಕರು ದೇವಸ್ಥಾನದೊಳಗೆ ಹೋಗುತ್ತೇವೆಂದು ಮಂಗಳವಾರ ತಹಶೀಲ್ದಾರ್ ಡಾ.ಸುಮಂತ್ ಅವರಿಗೆ ಮನವಿ ಸಲ್ಲಿಸಿದ್ದು, ದೇವಸ್ಥಾನದೊಳಗೆ ಪ್ರವೇಶಿಸಲು ನಮ್ಮ ಅಭ್ಯಂತರವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆನ್ನಲಾಗಿದೆ.

ಮಂಗಳವಾರ ಪೂಜೆ ನಡೆಯುತ್ತಿದ್ದ ವೇಳೆ ಯುವಕರು ದೇವಸ್ಥಾನದೊಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಕುರುಬ ಸಮುದಾಯದವರು ಪೂಜೆ ಸಲ್ಲಿಸದೆ ಹಿಂದಿರುಗಿದ್ದಾರೆಂದು ತಿಳಿದು ಬಂದಿದೆ.

ದೇವಸ್ಥಾನ 2012ರಲ್ಲಿ ಮುಜರಾಯಿ ಇಲಾಖೆಗೆ ಸೇರಿದ್ದು, ಹಿಂದಿನಿಂದಲೂ ಪೂಜೆ ಸಲ್ಲಿಸುತ್ತಿದ್ದ ಕುರುಬರು ಮಂಗಳವಾರ ಪೂಜೆ ಸ್ಥಗಿತಗೊಳಿಸಿ ಮನೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News