ಚಿಕ್ಕಮಗಳೂರು | ಅವಾಚ್ಯ ಶಬ್ಧಗಳಿಂದ ನಿಂದನೆ ಆರೋಪ ; ಜಿಲ್ಲಾಸ್ಪತ್ರೆ ವೈದ್ಯರಿಗೆ ಚಪ್ಪಲಿ ಎಸೆದು ಹಲ್ಲೆಗೆ ಯತ್ನಿಸಿದ ಮಹಿಳೆ

Update: 2024-09-10 13:53 GMT

ಚಿಕ್ಕಮಗಳೂರು : ಜಗಳದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆತಂದಿದ್ದ ವೇಳೆ ತುರ್ತು ಚಿಕಿತ್ಸಾ ಘಟಕದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರೊಬ್ಬರು ಅಚಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂದು ಆರೋಪಿಸಿ, ವೈದ್ಯರತ್ತ ಚಪ್ಪಲಿ ಎಸೆದು ಹಲ್ಲೆಗೆ ಯತ್ನಿಸಿದ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ. ಹಲ್ಲೆಗೆ ಯತ್ನಿಸಿದ ಘಟನೆ ಖಂಡಿಸಿ ಹಾಗೂ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಕರ್ತವ್ಯ ಬಹಿಷ್ಕರಿಸಿ ಜಿಲ್ಲಾಸ್ಪತ್ರೆ ಎದುರು ಧರಣಿ ನಡೆಸಿದ ಘಟನೆ ನಡೆದಿದೆ.

ನಗರದ ಟಿಪ್ಪು ನಗರದಲ್ಲಿ ಸೋಮವಾರ ಬೆಳಗ್ಗೆ ಎರಡು ಗುಂಪುಗಳ ನಡುವೆ ಜಗಳ ನಡೆದಿದ್ದು, ಜಗಳ ತಾರಕಕ್ಕೇರಿ ಎರಡು ಗುಂಪಿನವರು ಪರಿಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಹೊಡೆದಾಟದಲ್ಲಿ ಇರ್ಫಾನ್, ಸಿಕಂದರ್ ಎಂಬವರಿಗೆ ಗಾಯಗೊಂಡಿದ್ದರು. ಗಾಯಗೊಂಡಿದ್ದ ಸಿಕಂದರ್ ಹಾಗೂ ಇರ್ಫಾನ್‍ರನ್ನು ಅವರ ಸಂಬಂಧಿಗಳು ನಗರದ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಗಾಯಗೊಂಡಿದ್ದ ಇರ್ಫಾನ್‍ನನ್ನು ವೈದ್ಯ ವೆಂಕಟೇಶ್ ಎಂಬರು ತಪಾಸಣೆ ಮಾಡಲು ಮುಂದಾಗಿದ್ದಾರೆ. ಇದೇ ಹೊತ್ತಿನಲ್ಲಿ ಗಾಯಾಳುಗಳೊಂದಿಗೆ ಬಂದಿದ್ದವರು ವೈದ್ಯರಿದ್ದ ಕೊಠಡಿಗೆ ಪದೇ ಪದೇ ಬರುತ್ತಿದ್ದುದನ್ನು ಗಮನಿಸಿದ ವೈದ್ಯ ವೆಂಕಟೇಶ್, ಎಲ್ಲರನ್ನು ಹೊರಗೆ ಕಳುಹಿಸಲು ಹೇಳಿದ್ದಾರೆ ಎನ್ನಲಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಇರ್ಫಾನ್ ಸಹೋದರಿ ತಸ್ಲೀಮಾ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಇರ್ಫಾನ್ ಕಡೆಯವರು ಆರೋಪಿಸಿದ್ದಾರೆ. ವೈದ್ಯರ ಮಾತಿನಿಂದ ಕುಪಿತಳಾದ ತಸ್ಲೀಮಾ ತಾನು ಧರಿಸಿದ್ದ ಚಪ್ಪಲಿಯನ್ನು ವೈದ್ಯ ವೆಂಕಟೇಶ್ ಅವರತ್ತ ಎಸೆದು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಯ ಇತರೆ ವೈದ್ಯರು ಹಾಗೂ ಎಲ್ಲಾ ಸಿಬ್ಬಂದಿಗಳು ಕೆಲಸ ಬಹಿಷ್ಕರಿಸಿ, ವೈದ್ಯರ ಮೇಲೆ ಹಲ್ಲೆ ಮಾಡಲಾಗಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಕರ್ತವ್ಯನಿರತ ವೈದ್ಯರು ಹಾಗೂ ಎಲ್ಲ ಸಿಬ್ಬಂದಿಗೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ಆರಂಭಿಸಿದರು.

ಈ ವೇಳೆ ಸ್ಥಳದಲ್ಲಿದ್ದ ಜಿಲ್ಲಾ ಸರ್ಜನ್ ಡಾ.ಮೋಹನ್‍ಕುಮಾರ್ ಮಾತನಾಡಿ, ಆರೋಪಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಲಾಗುವುದು. ಆಸ್ಪತ್ರೆಯಲ್ಲಿ ಸೂಕ್ತ ಭದ್ರತೆ ಒದಗಿಸಲು ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರೂ ವೈದ್ಯರು ಮತ್ತು ಸಿಬ್ಬಂದಿ ಪಟ್ಟು ಸಡಿಲಿಸಲಿಲ್ಲ. ಆರೋಪಿಗಳ ಬಂಧನವಾಗದೇ ಹೊರತು ಕೆಲಸಕ್ಕೆ ಮರಳುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಈ ವೇಳೆ ಸ್ಥಳಕ್ಕೆ ಬಂದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಡಿವೈಎಸ್ಪಿ ಶೈಲೇಂದ್ರ, ಕಂದಾಯ ಉಪವಿಭಾಗಾಧಿಕಾರಿ ದಲ್ಜಿತ್‍ಕುಮಾರ್, ಡಿಎಚ್‍ಒ ಡಾ.ಅಶ್ವಥ್‍ಬಾಬು ಅವರು ಜಿಲ್ಲಾ ಸರ್ಜನ್ ಡಾ.ಮೋಹನ್‍ಕುಮಾರ್ ಹಾಗೂ ಜಿಲ್ಲಾಸ್ಪತ್ರೆಯ ಇತರ ವೈದ್ಯರೊಂದಿಗೆ ತುರ್ತು ಸಭೆ ನಡೆಸಿ ಘಟನೆ ಬಗ್ಗೆ ಮಾಹಿತಿ ಪಡೆದು ಕೆಲ ಹೊತ್ತು ಚರ್ಚೆ ನಡೆಸಿದರು.

ನಂತರ ಧರಣಿನಿ ರತ ವೈದ್ಯರು, ಸಿಬ್ಬಂದಿ ಉದ್ದೇಶಿಸಿದ ಮಾತನಾಡಿದ ಡಾ.ಮೋಹನ್‍ಕುಮಾರ್, ಡಾ.ವೆಂಕಟೇಶ್ ಮೇಲೆ ಹಲ್ಲೆ ನಡೆಸಿದ ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗುವುದು. ಎಫ್‍ಐಆರ್ ದಾಖಲಾಗುತ್ತಿದ್ದಂತೆ ಆರೋಪಿಗಳನ್ನು ಬಂಧಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸುವುದನ್ನು ತಡೆಯಲು ಜಿಲ್ಲಾಸ್ಪತ್ರೆಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸುವ ಭರವಸೆಯನ್ನು ಪೊಲೀಸ್ ಇಲಾಖೆ ನೀಡಿದೆ. ಧರಣಿಯಿಂದ ರೋಗಿಗಳು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ವೈದ್ಯರು, ಸಿಬ್ಬಂದಿ ಕರ್ತವ್ಯಕ್ಕೆ ಮರಳಬೇಕೆಂದು ಮನವಿ ಮಾಡಿದರು.

ಎಎಸ್ಪಿ ಕೃಷ್ಣಮೂರ್ತಿ ಮಾತನಾಡಿ, ಘಟನೆ ಸಂಬಂಧ ಎಲ್ಲ ಮಾಹಿತಿ ಪಡೆದಿದ್ದೇವೆ. ಆಸ್ಪತ್ರೆಯಲ್ಲಿನ ಭದ್ರತಾ ಸಮಸ್ಯೆ ಬಗ್ಗೆ ಜಿಲ್ಲಾ ಸರ್ಜನ್ ಮನವರಿಕೆ ಮಾಡಿದ್ದಾರೆ.  ಘಟನೆ ಬಗ್ಗೆ ಎಫ್‍ಐಆರ್ ದಾಖಲಾಗುತ್ತಿದ್ದಂತೆ ಆರೋಪಿಗಳನ್ನು ಬಂಧಿಸಲಾಗುವುದು. ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಆಸ್ಪತ್ರೆಯಲ್ಲಿರುವ ರೋಗಿಗಳು, ಸಾರ್ವಜನಿಕರಿಗೆ ತೊಂದರೆ ಕೊಡುವುದು ಸರಿಯಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ವೈದ್ಯರು, ಸಿಬ್ಬಂದಿ ಮೇಲಿನ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದರು.

ಆದರೆ ಇದಕ್ಕೆ ಒಪ್ಪದ ವೈದ್ಯರು ಮತ್ತು ಸಿಬ್ಬಂದಿ, ಆರೋಪಿಗಳ ಬಂಧನವಾಗದ ಹೊರತು ಕೆಲಸ ಮಾಡಲ್ಲ ಎಂದು ಪಟ್ಟು ಹಿಡಿದರು. ನಂತರ ಜಿಲ್ಲಾ ಸರ್ಜನ್ ಸೇರಿದಂತೆ ಎಲ್ಲ ವೈದ್ಯರು ಮತ್ತು ಸಿಬ್ಬಂದಿ ನಗರ ಠಾಣೆವರೆಗೆ ಕಾಲ್ನಡಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಕೆಲ ಸಂಘ ಸಂಸ್ಥೆಗಳು ವೈದ್ಯರ ಪ್ರತಿಭಟನೆ ಬೆಂಬಲಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಠಾಣೆಯ ಎದುರು ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ನಂತರ ಜಿಲ್ಲಾಸರ್ಜನ್ ನೀಡಿದ ದೂರಿನ ಮೇರೆಗೆ ಪೊಲೀಸರು, ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದರಿಂದ ವೈದ್ಯರು, ಸಿಬ್ಬಂದಿ ಕರ್ತವ್ಯಕ್ಕೆ ಮರಳಿದರು.

"ಎರಡು ಗುಂಪುಗಳ ನಡುವೆ ಜಗಳವಾಗಿದ್ದು, ಜಗಳದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆತಂದಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಮಹಿಳೆ ತಸ್ಲೀಮಾ ಎಂಬವರು ವೈದ್ಯ ಡಾ.ವೆಂಕಟೇಶ್ ಅವರಿಗೆ ಚಪ್ಪಲಿಯಿಂದ ಹೊಡೆಯುವ ಮೂಲಕ ವೈದ್ಯರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಈ ಘಟನೆ ಖಂಡಿಸಿ ವೈದ್ಯರು ಸಿಬ್ಬಂದಿ ಪ್ರತಿಭಟನೆ ಮಾಡಿದ್ದಾರೆ. ಆರೋಪಿಗಳಾದ ತಸ್ಲೀಮಾ ಹಾಗೂ ಇರ್ಫಾನ್ ಎಂಬವರ ಮೇಲೆ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆರೋಪಿಗಳನ್ನು ಕೂಡಲೇ ಬಂಧಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ. ವೈದ್ಯರು, ಸಿಬ್ಬಂದಿ ಕೆಲಸಕ್ಕೆ ಮರಳಿದ್ದು, ಇಂತಹ ಘಟನೆಗಳನ್ನು ತಪ್ಪಿಸಲು ಪೊಲೀಸ್ ಇಲಾಖೆ ಹೆಚ್ಚುವರಿ ಭದ್ರತೆ ಒದಗಿಸಬೇಕೆಂದು ಮನವಿ ಮಾಡಿದ್ದೇವೆ. ಇದಕ್ಕೆ ಪೊಲೀಸ್ ಇಲಾಖೆ ಸ್ಪಂದಿಸಿದೆ"

- ಡಾ.ಮೋಹನ್‍ಕುಮಾರ್, ಜಿಲ್ಲಾ ಸರ್ಜನ್

"ಸೋಮವಾರ ಬೆಳಗ್ಗೆ 10:35ರ ಸಮಯದಲ್ಲಿ ಗಾಯಗೊಂಡಿದ್ದ ಇರ್ಫಾನ್ ಹಾಗೂ ಸಿಕಂದರ್ ಚಿಕಿತ್ಸೆಗೆ ಬಂದಿದ್ದರು. ಇಬ್ಬರಿಗೂ ಚಿಕಿತ್ಸೆ ನೀಡುತ್ತಿದ್ದ ವೇಳೆ ಕೊಠಡಿಯೊಳಗೆ ಬಂದಿದ್ದವರನ್ನು ಹೊರಗೆ ಕಳುಹಿಸಿದ್ದೇನೆ. ಇಷ್ಟಕ್ಕೆ ಇರ್ಫಾನ್ ಸಹೋದರಿ, ನನಗೆ ಬೈದಿದ್ದೀರಿ ಎನ್ನುತ್ತಾ ನನ್ನ ಕೊರಳಪಟ್ಟಿ ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ. ಸ್ಥಳದಲ್ಲಿದ್ದವರು ಬಿಡಿಸಿದ್ದಾರೆ. ಮಹಿಳೆ ನನಗೆ ಹೊಡೆದಿಲ್ಲ, ಹಲ್ಲೆಗೆ ಯತ್ನಿಸಿ, ಚಪ್ಪಲಿಯನ್ನು ತನ್ನತ್ತ ಎಸೆದಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಕಾನೂನು ಕ್ರಮ ಜರುಗಿಸಲಿದ್ದಾರೆ"

- ಡಾ.ವೆಂಕಟೇಶ್, ಜಿಲ್ಲಾಸ್ಪತ್ರೆಯ ಮೂಳೆ ತಜ್ಞ

ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು :

ಜಿಲ್ಲಾಸ್ಪತ್ರೆಯ ಮೂಳೆ ತಜ್ಞ ಡಾ.ವೆಂಕಟೇಶ್ ಅವರು ನೀಡಿದ ದೂರಿನ ಮೇರೆಗೆ ನಗರ ಠಾಣೆ ಪೊಲೀಸರು, ಆರೋಪಿಗಳಾದ ತಸ್ಲೀಮಾ ಹಾಗೂ ಆಕೆಯ ಸಹೋದರ ಇರ್ಫಾನ್ ಎಂಬವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಸೆ.18ರವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಪ್ರಕರಣದ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News