ಚಿಕ್ಕಮಗಳೂರು | ಕೆಎಸ್ಸಾರ್ಟಿಸಿ ಡಿಸಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಸಹದ್ಯೋಗಿ
ಚಿಕ್ಕಮಗಳೂರು: ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮೇಲೆ ಇಲಾಖೆಯ ಕಿರಿಯ ಸಹಾಯಕನೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಗುರುವಾರ ಸಂಜೆ ನಗರದಲ್ಲಿ ನಡೆದಿದ್ದು, ಹಲ್ಲೆಯಿಂದ ಗಾಯಗೊಂಡಿರುವ ಅಧಿಕಾರಿಯನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಕೆಎಸ್ಸಾರ್ಟಿಸಿ ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಕುಮಾರ್ ಸಹದ್ಯೋಗಿಯಿಂದಲೇ ಹಲ್ಲೆಗೊಳಾದ ಅಧಿಕಾರಿಯಾಗಿದ್ದು, ಸಂಸ್ಥೆ ಕಿರಿಯ ಸಹಾಯಕ ರಿತೀಶ್ ಚಾಕುವಿನಿಂದ ಹಲ್ಲೆ ಮಾಡಿರುವ ಆರೋಪಿಯಾಗಿದ್ದಾನೆ.
ಅಧಿಕಾರಿ ಜಗದೀಶ್ ಕುಮಾರ್ ಗುರುವಾರ ಸಂಜೆ ಕರ್ತವ್ಯ ಮುಗಿಸಿ ಮನೆಗೆ ಹೋಗಲು ತಮ್ಮ ವಾಹನ ಏರುತ್ತಿದ್ದಂತೆ ಹಿಂದಿನಿಂದಲೇ ಬಂದ ರಿತೀಶ್, ಜಗದೀಶ್ ಕುಮಾರ್‌ಗೆ ಚಾಕುವಿನಿಂದ ಚುಚ್ಚಿದ್ದಾನೆ ಎನ್ನಲಾಗಿದೆ. ಈ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರಿಂದ ಜಗದೀಶ್ ಅವರ ಕೈಗೂ ಗಾಯವಾಗಿದೆ. ಘಟನೆಯಲ್ಲಿ ಅಧಿಕಾರಿ ತೀವ್ರವಾಗಿ ಗಾಯಗೊಂಡಿದ್ದು, ಸಂಸ್ಥೆಯ ಸಿಬ್ಬಂದಿ ಕೂಡಲೇ ಗಾಯಗೊಂಡಿದ್ದ ಅಧಿಕಾರಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಜಗದೀಶ್‍ಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಹಾಜರಾತಿಗೆ ಸಂಬಂಧಿಸಿದಂತೆ ರಿತೀಶ್ ಕುಟುಂಬಸ್ಥರನ್ನು ತಮ್ಮ ಕಚೇರಿಗೆ ಕರೆಸಿಕೊಂಡಿದ್ದ ಕೆಎಸ್ಸಾರ್ಟಿಸಿ ಡಿಸಿ ಜಗದೀಶ್ ಕುಮಾರ್, ರಿತೀಶ್ ಮುಂದೆಯೇ ಬುದ್ಧಿವಾದ ಹೇಳಿದ್ದರು. ಅಲ್ಲದೇ ಕುಟುಂಬಸ್ಥರ ಮನವಿಯಂತೆ ಬೇಲೂರಿಗೆ ವರ್ಗಾವಣೆ ಮಾಡಿದ್ದರು ಎಂದು ತಿಳಿದು ಬಂದಿದ್ದು, ಇದರಿಂದ ಕುಪಿತಗೊಂಡಿದ್ದ ರಿತೇಶ್ ಗುರುವಾರ ಸಂಜೆ ಅಧಿಕಾರಿ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆಂದು ತಿಳಿದು ಬಂದಿದೆ.
ಘಟನೆ ಸಂಬಂಧ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರಿತೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದೆ.