ಚಿಕ್ಕಮಗಳೂರು | 92 ಕಿ.ಮೀ ʼಮಾನವ ಸರಪಳಿʼ ನಿರ್ಮಿಸಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

Update: 2024-09-15 11:34 GMT

ಚಿಕ್ಕಮಗಳೂರು : ಶಾಲಾ ಕಾಲೇಜು ಮಕ್ಕಳೂ ಸೇರಿದಂತೆ ಸರಕಾರಿ ನೌಕರರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಜಿಲ್ಲಾದ್ಯಂತ 92 ಕಿ.ಮೀ. ಮಾನವ ಸರಪಳಿ ನಿರ್ಮಿಸಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಸಂಭ್ರಮ, ಸಡಗರದಿಂದ ಅದ್ದೂರಿಯಾಗಿ ಆಚರಿಸಿದರು.

ರವಿವಾರ ನಗರದ ಆಜಾದ್‍ ಪಾರ್ಕ್ ವೃತ್ತದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ, ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು. ಪ್ರಜಾಪ್ರಭುತ್ವ ದಿನಾಚರಣೆ ಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರು ಪರಸ್ಪರ ಕೈಹಿಡಿದು ಸರಪಳಿ ನಿರ್ಮಿಸಿದರು. ನಂತರ ಎರಡು ಕೈಗಳನ್ನು ಮೇಲೆತ್ತಿ ಪ್ರಜಾಪ್ರಭುತ್ವ ದಿನವನ್ನು ಸಂಭ್ರಮಿಸಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೋಗೀಶ್ ಸಂವಿಧಾನ ಪೀಠಿಕೆ ಓದಿದರು. ಇವರ ಜತೆ ಪ್ರತಿಯೊಬ್ಬರು ಸಂವಿಧಾನ ಪೀಠಿಕೆಯನ್ನು ಪಠಿಸಿದರು.

ಚಿಕ್ಕಮಗಳೂರು ಗಡಿಭಾಗದ ಮಾಗಡಿ ಕೈಮರದಿಂದ ಆರಂಭವಾದ ಪ್ರಜಾಪ್ರಭುತ್ವ, ಸಂವಿಧಾನ ಜಾಗೃತಿಯ ಮಾನವ ಸರಪಳಿ ನಗರದ ಹಿರೇಮಗಳೂರು, ಎಂ.ಜಿ.ರಸ್ತೆ, ಸಖರಾಯಪಟ್ಟಣ, ಕಡೂರು, ಬೀರೂರು, ತರೀಕೆರೆ ಮಾರ್ಗವಾಗಿ ಜಿಲ್ಲೆಯ ಗಡಿ ಎಂ.ಸಿ.ಹಳ್ಳಿವರೆಗೆ ಒಟ್ಟು 92ಕೀ.ಮೀ. ಮಾನವ ಸರಪಳಿ ನಿರ್ಮಿಸಲಾಯಿತು. ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಮುಖಂಡರು, ಸ್ವಯಂಸೇವಕರು, ಸೇರಿದಂತೆ ಜಿಲ್ಲಾದ್ಯಂತ 80ಸಾವಿರಕ್ಕೂ ಹೆಚ್ಚಿನ ಜನ ಮಾನವ ಸರಪಳಿಯಲ್ಲಿ ಏಕಕಾಲದಲ್ಲಿ ಪಾಲ್ಗೊಂಡರು. ಮಾನವ ಸರಪಳಿಯಲ್ಲಿ ಭಾಗವಹಿಸಿದ್ದ ಶಾಲಾ ಕಾಲೇಜು ಮಕ್ಕಳಿಗೆ ಸಾರ್ವಜನಿಕರು, ನೀರು, ಸಿಹಿತಿಂಡಿಗಳನ್ನು ನೀಡುತ್ತಿದ್ದ ದೃಶ್ಯ ಕಂಡು ಬಂತು.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಗೂ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ವಿವಿಧತೆಯಲ್ಲಿ ಏಕತೆ ಸಾರುವ ನಮ್ಮ ಹೆಮ್ಮೆಯ ರಾಷ್ಟ್ರದ ವೈವಿದ್ಯಮಯ ಧ್ವನಿಗಳ ಅಭಿವ್ಯಕ್ತಿಗೆ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಗೆ ಅವಕಾಶ ನೀಡುವ ಆಡಳಿತ ವ್ಯವಸ್ಥೆಯೇ ಪ್ರಜಾಪ್ರಭುತ್ವದ ಜೀವಾಳವಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿ.ಎಚ್.ಹರೀಶ್, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಉಪಾಧ್ಯಕ್ಷೆ ಅನು ಮಧುಕರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದರ್ ಕುಮಾರ್ ದಹೀಮ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News