ಚಿಕ್ಕಮಗಳೂರು| ಬಸ್ ಚಾಲಕ, 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

Update: 2024-01-02 07:47 GMT

ಚಿಕ್ಕಮಗಳೂರು: ಶಾಲಾ ಬಸ್ ಚಾಲಕನ ಪ್ರೇಮದಾಟಕ್ಕೆ ಸಿಲುಕಿ 8ನೇ ತರಗತಿ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆಗೆ ಸಂಬಂಧಿಸಿದಂತೆ  ಅಜ್ಜಂಪುರ ತಾಲೂಕಿನ ಖಾಸಗಿ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಏನಿದು ಘಟನೆ

ಶಾಲಾ ಬಸ್ ಡ್ರೈವರ್ , 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಂಕನಕಟ್ಟೆ ಗ್ರಾಮದಲ್ಲಿ ರವಿವಾರ ನಡೆದಿತ್ತು.

ರೈಲಿಗೆ ಅಡ್ಡಲಾಗಿ ನಿಂತು ಡ್ರೈವರ್ ಸಂತೋಷ್ (38) ಹಾಗೂ 8ನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟಿದ್ದರು. ಅಜ್ಜಂಪುರ ತಾಲೂಕಿನ ಗಿರಿಯಾಪುರ ಗ್ರಾಮದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಅದೇ ಶಾಲೆಯ ಬಸ್ ಡ್ರೈವರ್ ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.

ಬಸ್ ಡ್ರೈವರ್ ನೀಡುತ್ತಿದ್ದ ಕಿರುಕುಳದ ಬಗ್ಗೆ ವಿದ್ಯಾರ್ಥಿನಿ ಪೋಷಕರು ಶಾಲಾ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು. ವಿದ್ಯಾರ್ಥಿನಿ ರಾತ್ರಿ ಸ್ನೇಹಿತೆಯರ ಜೊತೆ ಹೊಸ ವರ್ಷದ ಪಾರ್ಟಿಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ತೆರಳಿದ್ದಳು. ಈ ವೇಳೆ ಸಂತೋಷ್ ವಿದ್ಯಾರ್ಥಿನಿಯನ್ನು ಕರೆದೊಯ್ದು ಮಧ್ಯರಾತ್ರಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಶಾಲಾ ಡ್ರೈವರ್ ತಮ್ಮ ಮಗಳಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ವಿಚಾರದ ಬಗ್ಗೆ ಪೋಷಕರು ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆ ಸಂಬಂಧ ಬೀರೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News