ಚಿಕ್ಕಮಗಳೂರು | ಕೃಷಿ ಹೊಂಡದಲ್ಲಿ ಮುಳುಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು
ಚಿಕ್ಕಮಗಳೂರು : ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಾಫಿ ತೋಟದ ಮಾಲಕರೊಬ್ಬರ ಜಮೀನಿನಲ್ಲಿದ್ದ ಬೃಹತ್ ಕೃಷಿ ಹೊಂಡದಲ್ಲಿ ಈಜಲು ಹೋಗಿ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಮೃತ ಯುವಕನನ್ನು ಹಾವೇರಿ ಜಿಲ್ಲೆಯ ಮಕರವಳ್ಳಿ ಗ್ರಾಮದ ಆಕಾಶ್ ಎಂ.ಪಿ(21) ಎಂದು ಗುರುತಿಸಲಾಗಿದ್ದು, ಈತ ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿರುವ ತನ್ನ ಅಣ್ಣನ ಮನೆಯಲ್ಲಿ ಉಳಿದುಕೊಂಡಿದ್ದ. ಎ.27ರಂದು ತನ್ನ ಅಣ್ಣ ಕುಶಾಲ್ ಹಾಗೂ ಸ್ನೇಹಿತದಾರ ಭರತ್, ಶ್ರೇಯಸ್ ಎಂಬವರೊಂದಿಗೆ ಆಕಾಶ್ ಬೆಂಗಳೂರಿನಿಂದ ಚಿಕ್ಕಮಗಳೂರು ಪ್ರವಾಸಕ್ಕೆ ಬಂದಿದ್ದ ಎನ್ನಲಾಗಿದೆ. ಗೋಣಿಬೀಡು ಗ್ರಾಮದಲ್ಲಿರುವ ಜಯರಾಮೇಗೌಡ ಎಂಬವರ ಹೋಮ್ ಸ್ಟೇನಲ್ಲಿ ಉಳಿದು ಕೊಂಡಿದ್ದರು. ರವಿವಾರ ಸಂಜೆ ನಾಲ್ವರು ಜಯರಾಮೇಗೌಡ ಅವರ ಜಮೀನಿನಲ್ಲಿದ್ದ ಬೃಹತ್ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದರು ಎಂದು ಹೇಳಲಾಗಿದೆ.
ಈ ವೇಳೆ ಕೃಷಿ ಹೊಂಡದ ಆಳದ ಅರಿವಿದರ ಆಕಾಶ್ ಈಜಾಡುತ್ತ ಆಳದ ಗುಂಡಿಗೆ ಇಳಿದಿದ್ದಾನೆ. ಈ ವೇಳೆ ಗುಂಡಿಯ ಕೆಸರಿನಲ್ಲಿ ಸಿಲುಕಿಕೊಂಡ ಆಕಾಶ್ ಮೇಲೆ ಬರಲಾರದೇ ನಾಪತ್ತೆಯಾಗಿದ್ದ. ಸಹೋದರ ಹಾಗೂ ಸ್ನೇಹಿತರು ಕೃಷಿ ಹೊಂಡದಲ್ಲಿ ಆಕಾಶ್‍ಗಾಗಿ ಎಷ್ಟೇ ಹುಡುಕಿದರೂ ಪತ್ತೆಯಾಗಿಲ್ಲ. ನಂತರ ಸ್ಥಳೀಯ ಮುಳುಗುತಜ್ಞ ಸ್ನೇಕ್ ಆರೀಫ್ ಜತೆ ಗೋಣಿಬೀಡು ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಸಂಜೆ, ರಾತ್ರಿವರೆಗೂ ಹುಡುಕಾಡಿದರೂ ಆಕಾಶ್ ಮೃತದೇಹ ಪತ್ತೆಯಾಗಿಲ್ಲ. ಸೋಮವಾರ ಬೆಳಗ್ಗೆ ಮಂಗಳೂರು ಮೂಲದ ಮುಳುಗುತಜ್ಞರು ಹಾಗೂ ಸ್ನೇಕ್ ಆರೀಫ್ ಆಕಾಶ್ ಶವಕ್ಕಾಗಿ ಹುಡುಕಾಡಿದ ಸುಮಾರು 2 ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿದೆ.
ಘಟನೆ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.