ಚಿಕ್ಕಮಗಳೂರು | ಕಾಡುಕೋಣ ದಾಳಿ : ರೈತನಿಗೆ ಗಂಭೀರ ಗಾಯ
ಚಿಕ್ಕಮಗಳೂರು : ರೈತರೊಬ್ಬರು ಜಮೀನಿನಲ್ಲಿ ಹುಲ್ಲು ಕಟಾವು ಮಾಡುತ್ತಿದ್ದ ವೇಳೆ ಕಾಡುಕೋಣವೊಂದು ದಿಢೀರ್ ದಾಳಿ ನಡೆಸಿದ ಪರಿಣಾಮ ರೈತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಅಬ್ರುಗುಡಿಗೆ ಗ್ರಾಮದಲ್ಲಿ ವರದಿಯಾಗಿದೆ.
ಅಬ್ರುಗುಡಿಗೆ ಗ್ರಾಮ ಸಮೀಪದ ಆನಂಬಿ ನಿವಾಸಿಯಾಗಿರುವ ವಿಶ್ವನಾಥ್ ಭಟ್(60) ಎಂಬ ರೈತನ ಮೇಲೆ ಕಾಡುಕೋಣ ದಾಳಿ ನಡೆಸಿದ್ದು, ದಾಳಿಯಿಂದ ರೈತನ ಕೈ, ಕಾಲು, ಹೊಟ್ಟೆ ಭಾಗಕ್ಕೂ ಪೆಟ್ಟಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ರೈತನನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಶುಕ್ರವಾರ ಬೆಳಗ್ಗೆ ತಮ್ಮ ಜಮೀನಿನಲ್ಲಿ ಹುಲ್ಲು ಕಟಾವು ಮಾಡುತ್ತಿದ್ದ ವೇಳೆ ಜಮೀನು ಸಮೀಪದ ಕಾಡಿನಿಂದ ಏಕಾಏಕಿ ಬಂದ ಕಾಡುಕೋಣ ರೈತನ ಮೇಲೆ ದಿಢೀರ್ ದಾಳಿ ಮಾಡಿದೆ ಎನ್ನಲಾಗಿದೆ. ದಾಳಿಯಿಂದ ಗಂಭೀರವಾಗಿ ಗಾಯಗೊಂಡ ರೈತ ವಿಶ್ವನಾಥ್ ಭಟ್ ನಡೆಯಲಾಗದೇ ಜಮೀನಿನಲ್ಲೇ ಬಿದ್ದಿದ್ದರು, ಇದನ್ನು ಗಮನಿಸಿದ ಕುಟುಂಬಸ್ಥರು ಕೂಡಲೇ ರೈತನನ್ನು ಕಳಸ ಪಟ್ಟಣದ ಆಸ್ಪತ್ರೆಗೆ ಕರೆತಂದಿದ್ದಾರೆ. ರೈತ ಗಂಭೀರವಾಗಿ ಗಾಯಗೊಂಡಿದ್ದರಿಂದ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ.
ಅಬ್ರಗುಡಿಗೆ ಭಾಗದಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು, ರೈತರು ಪ್ರಾಣ ಭಯದಲ್ಲಿ ಕೃಷಿ ಕೆಲಸ ಮಾಡುವಂತಾಗಿದೆ. ಕೂಲಿ ಕಾರ್ಮಿಕರೂ ಕೂಡ ಕೆಲಸಕ್ಕೆ ಬರುತ್ತಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕಾಡುಕೋಣಗಳ ಹಾವಳಿ ತಪ್ಪಿಸಬೇಕೆಂದು ರೈತರು ಮನವಿ ಮಾಡಿದ್ದಾರೆ.